Site icon Vistara News

Murugha seer case | ಕಾಮಕಾಂಡ ಬಯಲಿಗೆಳೆದ ಒಡನಾಡಿ ಬಾಯಿ ಮುಚ್ಚಿಸಲು 3 ಕೋಟಿ ರೂ. ಆಫರ್‌, ಮಂತ್ರಿಯ ಮಧ್ಯಸ್ಥಿಕೆ?

ಮುರುಗಾಶ್ರೀ ಪ್ರಕರಣ

ಮೈಸೂರು: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ (murugha Seer case) ಎರಡು ಎಫ್​ಐಆರ್ ದಾಖಲಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಒಡನಾಡಿ ಸೇವಾ ಸಂಸ್ಥೆಗೆ ದುಡ್ಡು ಕೊಟ್ಟು ಕೇಸ್​ ಮುಚ್ಚಿ ಹಾಕಲು ಪ್ರಯತ್ನಗಳು ನಡೆದಿವೆಯಾ? ಬರೋಬ್ಬರಿ 3 ಕೋಟಿ ರೂ. ಆಫರ್ ಕೊಟ್ಟಿದ್ದರು, ಮಂತ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿದ್ದರು ಎಂದು ಸ್ವತಃ ಒಡನಾಡಿ ಸೇವಾ ಸಂಸ್ಥೆ ಆರೋಪ ಮಾಡಿದೆ.

ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಕಾಯ್ದೆಯಡಿ ಅರೆಸ್ಟ್ ಆಗಿದ್ದಾರೆ. ಜಾಮೀನು ಸಿಗದ ಕಾರಣ ತಿಂಗಳಾನುಗಟ್ಟಲೇ ಜೈಲುವಾಸವನ್ನೂ ಅನುಭವಿಸುತ್ತಿದ್ದಾರೆ. ಪ್ರಭಾವಿ ಮಠದ ಸ್ವಾಮೀಜಿಯೊಬ್ಬರಿಗೆ ಜೈಲು ಪಾಲಾಗಲು ಒಡನಾಡಿ ಸೇವಾ ಸಂಸ್ಥೆ ಕಾರಣವಾಗಿತ್ತು. ಸಂತ್ರಸ್ತ ಬಾಲಕಿಯರ ಪರವಾಗಿ ನಿಂತು ಎಫ್​ಐಆರ್ ಮಾಡಿಸಿತು, ತಮ್ಮದೇ ಸಂಸ್ಥೆಯಲ್ಲಿ ಆಶ್ರಯ ನೀಡುವ ಮೂಲಕ ಬಾಲಕಿಯರ ಬೆನ್ನಿಗೆ ನಿಂತಿದೆ. ಇಂತಹ ಸಂಸ್ಥೆಗೆ ಹಣ ಕೊಟ್ಟು ಕೇಸ್ ಮುಚ್ಚಿಹಾಕಲು ಪ್ರಯತ್ನ ನಡೆದಿರುವುದು ಬಹಿರಂಗವಾಗಿದೆ. 3 ಕೋಟಿ ರೂ. ಹಣ ಕೊಡಲು ಬಂದಿದ್ದರು. ಮಂತ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿದ್ದರು ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶುರಾಮ್ ಆರೋಪಿಸಿದ್ದಾರೆ.

ಚಿತ್ರದುರ್ಗದಿಂದ ಬಾಲಕಿಯರಿಬ್ಬರು ಮೈಸೂರಿಗೆ ಬಂದು, ಮೈಸೂರಿನಲ್ಲಿ ಎಫ್​ಐಆರ್ ಆಗಿ, ಒಡನಾಡಿಯವರು ಮಾಧ್ಯಮಗಳ ಮುಂದೆ ಸ್ವಾಮೀಜಿಯ ಪುರಾಣವನ್ನು ಬಿಡಿಬಿಡಿಯಾಗಿ ಹೇಳುತ್ತಿದ್ದ ಸಂದರ್ಭದಲ್ಲಿಯೇ ಈ ಆಫರ್‌ ಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ಮತ್ತೊಬ್ಬ ನಿರ್ದೇಶಕ ಸ್ಟ್ಯಾನ್ಲಿ, ಮೊದಲು ಹಣ ಕೊಡಲು ಬಂದರು, ಬಳಿಕ ನಮ್ಮ ಸಂಸ್ಥೆಯ ಮೇಲೆ ಕಲ್ಲು ಎಸೆದು ಹೆದರಿಸಲು ಬಂದರು, ನಮಗೂ ಪ್ರಾಣ ಬೆದರಿಕೆಗಳು ಬಂದವು. ಇದ್ಯಾವುದಕ್ಕೂ ನಾವು ಮಹತ್ವ ನೀಡಲಿಲ್ಲ. ಮಕ್ಕಳ ಪರವಾಗಿ ಗಟ್ಟಿಯಾಗಿ ನಿಂತುಕೊಳ್ಳುವುದು ನಮ್ಮ ಬದ್ಧತೆಯಾಗಿತ್ತು. ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಎನ್ನುತ್ತಾರೆ.

ಆದರೆ, ಹಣ ಮತ್ತು ಪ್ರಭಾವ ಎರಡೂ ಇರುವ ಸ್ವಾಮೀಜಿ ಪರವಾಗಿ ಮೂರು ಕೋಟಿ ರೂ. ಆಫರ್‌ನೊಂದಿಗೆ ವಕಾಲತ್ತು ಮಾಡಲು ಬಂದ ಮಂತ್ರಿ ಯಾರು ಎನ್ನುವುದನ್ನು ಒಡನಾಡಿ ಕೂಡಾ ಬಹಿರಂಗಪಡಿಸಿಲ್ಲ.

ಆಫರ್‌ ಕೊಟ್ಟವರು ಯಾರು ಎಂದು ಬಾಯಿ ಬಿಡಲಿ ಎಂದ ಮಠದ ವಕ್ತಾರ
ಈ ನಡುವೆ, ಮುರುಘಾಶ್ರೀಗಳಿಗೆ ಕಳಂಕ ತರಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಮೂರು ಕೋಟಿ ರೂ. ಆಫರ್‌ ಮಾಡಿದವರು ಯಾರು ಎಂದು ಒಡನಾಡಿ ಸಂಸ್ಥೆಯ ಪರಶುರಾಮ್‌ ಬಹಿರಂಗಪಡಿಸಬೇಕು. ಇಲ್ಲವಾದರೆ ಪೊಲೀಸರು ಪರಶುರಾಮ್‌ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಚಿತ್ರದುರ್ಗದಲ್ಲಿ ಮುರುಘಾಮಠದ ವಕ್ತಾರ ಎನ್‌.ಜಿತೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ʻʻಮುರುಘಾಶ್ರೀ ವಿರುದ್ಧದ ಫೊಕ್ಸೋ ಕೇಸ್ ನಲ್ಲಿ ಸಂಧಾನದ ಅಗತ್ಯ ಇಲ್ಲ. ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆಯಿದೆ. ಯಾರು ಆಮಿಷವೊಡ್ಡಿದ್ದಾರೆ ಎಂಬುದನ್ನು ಪರಶು ಹೇಳಬೇಕು. ಸಾಕ್ಷಾಧಾರಗಳನ್ನು ಕೂಡಲೇ ಬಿಡುಗಡೆ ಮಾಡಬೇಕುʼʼ ಎಂದು ಆಗ್ರಹಿಸಿದರು.

ʻʻಒಡನಾಡಿ ಸಂಸ್ಥೆ ರಾಷ್ಟ್ರೀಯ‌ ವಿಚಾರಧಾರೆಯ ವಿರೋಧಿ ಎಂದು ಮೊದಲಿನಿಂದ ಹೇಳಿದ್ದೇನೆ. ಬಿಜೆಪಿ ಸರ್ಕಾರದ ಪ್ರತಿಷ್ಠಿತ ಮಂತ್ರಿ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ವಿಚಾರಧಾರೆಯ ಬಿಜೆಪಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಇದು. ಕ್ರಿಶ್ಚಿಯನ್ ಮಷಿನರಿಗಳಿಂದ ಈರೀತಿ ಪ್ರಯತ್ನ ನಡೆಯುತ್ತಿದೆʼʼ ಎಂದಿರುವ ಜಿತೇಂದ್ರ ಅವರು, ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ದೂರು ದಾಖಲಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ | Murugha Seer | ಮುರುಘಾ ಶರಣರಿಂದ ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಒಡನಾಡಿ ಪರಶುರಾಮ್‌ ಆರೋಪ

Exit mobile version