ಮೈಸೂರು: ಒಂದೋ ನಮಗೆ ನ್ಯಾಯ ಕೊಡಿಸಿ, ಇಲ್ಲವಾದರೆ ದಯಾಮರಣವನ್ನಾದರೂ ಕೊಡಿ: ಹೀಗೆ ಸಂತ್ರಸ್ತ ಬಾಲಕಿಯರ ತಾಯಿಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಇದು ಅವರು ಬರೆಯುತ್ತಿರುವ ಎರಡನೇ ಪತ್ರ. ಮುರುಘಾಶ್ರೀಗಳಿಂದ (Murugha seer) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಲವು ವಿದ್ಯಾರ್ಥಿನಿಯರ ಪೈಕಿ ಒಬ್ಬರ ತಾಯಿ ಈ ರೀತಿ ಪತ್ರ ಬರೆದಿದ್ದಾರೆ. ʻʻತಳಮಟ್ಟದ ಸಮುದಾಯಗಳ ಮಹಿಳಾ ಪ್ರತಿನಿಧಿ ನೀವು. ನಮ್ಮಂತವರ ತಾಯಿ ಸ್ಥಾನದಲ್ಲಿದ್ದೀರಿʼʼ ಎಂದು ರಾಷ್ಟ್ರಪತಿಗಳಿಗೆ ಬರೆದ ಕರುಣಾಜನಕ ಪತ್ರದಲ್ಲಿ ಹೇಳಿದ್ದಾರೆ.
ʻʻಕೆಲವು ಅಧಿಕಾರಿಗಳಿಂದ ಪಿತೂರಿ ನಡೆಯುತ್ತಿದೆ. ಸ್ವಾಮೀಜಿಯಿಂದ ಯಾವ ಕೆಟ್ಟ ಕೃತ್ಯ ನಡೆದಿಲ್ಲ ಎಂಬರ್ಥದಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಅವರನ್ನು ಈ ಕೇಸಿನಿಂದ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆʼʼ ಎಂಬ ವಿಷಯವನ್ನು ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದಾರೆ ಈ ಮಹಿಳೆ.
ʻʻಪ್ರಕರಣ ದಾಖಲಾದ ನಂತರ ನಾನು ನನ್ನ ಮಕ್ಕಳು ಆಶ್ರಯ ಕಳೆದುಕೊಂಡಿದ್ದೇವೆ. ಊಟ ಆಶ್ರಯ ಇಲ್ಲದಂತಾಗಿದೆ. ಆಶ್ರಯ ಕೊಡುವವರನ್ನು ಅನುಮಾನದಿಂದ ನೋಡಲಾಗುತ್ತಿದೆ. ಪ್ರಧಾನ ಮಂತ್ರಿಯವರ ʻಬೇಟಿ ಬಚಾವೋ ಬೇಟಿ ಪಢಾವೋʼʼ ನಗೆ ಪಾಟಲಿಗೀಡಾಗುತ್ತಿದೆ. ನಮಗೆ ನ್ಯಾಯ ಕೊಡಿಸಿʼʼ ಎಂದು ಪತ್ರದ ಮೂಲಕ ಬಾಲಕಿಯರ ತಾಯಿ ಮನವಿ ಮಾಡಿದ್ದಾರೆ.
ರಾಷ್ಟ್ರಪತಿಗಳಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ
ತಳಮಟ್ಟದ ಸಮುದಾಯಗಳ ಹಾಗೂ ಮಹಿಳಾ ಪ್ರತಿನಿಧಿಯಾಗಿ, ತಾವು ನಮ್ಮ ದೇಶದ ರಾಷ್ಟ್ರಪತಿಗಳಾಗಿರುವುದಕ್ಕೆ ನನ್ನಂತಹ ನೊಂದ ಅಸಂಖ್ಯಾತ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಪರವಾಗಿ ಹೆಮ್ಮೆಯಿಂದ, ಗೌರವಯುತವಾಗಿ ಅಭಿನಂದಿಸುತ್ತೇನೆ. ನಮ್ಮಂತವರಿಗೆ ತಾಯಿಯ ಸ್ಥಾನದಲ್ಲಿರುವ ತಮಗೆ ನನಗಾಗಿರುವ ಅನ್ಯಾಯ ಹಾಗೂ ನೋವನ್ನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಗಂಡನ ದೌರ್ಜನ್ಯಕ್ಕೊಳಗಾಗಿ, ಕುಟುಂಬಕ್ಕೊಂದು ಗಂಡು ದಿಕ್ಕಿಲ್ಲದಂತಾಗಿ, ಆಸರೆ ಕಳೆದುಕೊಂಡು, ಮುಂದೆ ಜೀವನವಿಲ್ಲ ಎಂದು ತಿಳಿದು, ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದರೂ, ಸಾಯದೆ ಬದುಕುಳಿದು, ಯಾರದೋ ಸಲಹೆಯಂತೆ ಚಿತ್ರದುರ್ಗದ ಮುರುಘಾ ಮಠ ಸೇರಿ, ನರಕದ ಬಾಳು ಕಂಡವಳು ನಾನು.
ಮಾತೃ ಸಮಾನರಾದ ರಾಷ್ಟ್ರಪತಿಗಳೇ, ನನ್ನಿಬ್ಬರೂ ಅಪ್ರಾಪ್ತ ಮಕ್ಕಳನ್ನು ನಾನು ಆ ಮಠದಲ್ಲಿ ಇರುವಾಗಲೇ, ನನ್ನ ಕಣ್ಮುಂದೆಯೇ ಕರೆದುಕೊಂಡು ಹೋಗಿ ಸ್ವಾಮೀಜಿಯ ಕೋಣೆಗೆ ಬಿಟ್ಟು, ನನ್ನ ಅಮಾಯಕ ಕರುಳಕುಡಿಗಳು ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಪಟ್ಟು ಹೊರ ಬಂದಾಗಲೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದವಳು ನಾನು.
ಅನೇಕ ಮಕ್ಕಳು ನನ್ನ ಬಳಿ ಬಂದು ನಮ್ಮ ಮೇಲೆ ಸ್ವಾಮೀಜಿ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿಕೊಂಡಾಗಲೂ ನಾನು ಭಯದಿಂದ ಎಲ್ಲೂ ಏನೂ ಹೇಳಿರಲಿಲ್ಲ. ಮಠದಿಂದ ಹೊರಗೆ ಬಿದ್ದ ಮೇಲೆ ದಿಕ್ಕಿಲ್ಲದಂತಾದಾಗ ಕೆಲವು ಸಹೃದಯರ ನೆರವಿನೋಡನೆ ನನ್ನ ಮಕ್ಕಳಿಗೂ ನನಗೂ ನ್ಯಾಯ ಸಿಗಲಿ ಎಂಬ ಹಂಬಲದೊಡನೆ ಒಡನಾಡಿ ಸಂಸ್ಥೆಗೆ ಬಂದು ದೂರು ನೀಡಿರುವುದು ಕಾನೂನಿನ ಕಣ್ಣಿನಲ್ಲಿ ತಪ್ಪಾಗಿ ಕಾಣಿಸುತ್ತಿದೆ.
ನಮ್ಮಂತವರಿಗೆ ಯಾರು ಸಹಾಯ ಮಾಡಿಯಾರು? ನಮ್ಮ ಮಾತನ್ನು ಯಾರು ಕೇಳುತ್ತಾರೆ? ನಾವು ಇವರುಗಳ ವಿರುದ್ಧ ನ್ಯಾಯ ಕೇಳಬಹುದೇ ಎಂಬ ಸತ್ಯಗಳನ್ನು ಅರಿತು ಹೊಟ್ಟೆಯ ಉರಿಯನ್ನು ಅನುಭವಿಸುತ್ತಲೇ ಕಾಲ ಕಳೆದವಳು ನಾನು.
ಕೊನೆಗೊಂದು ದಿನ ಬೇರೆ ಯಾವುದೋ ಮಕ್ಕಳ ಮೇಲಿನ ದೌರ್ಜನ್ಯ ಸಮಾಜಕ್ಕೆ ತಿಳಿದು, ಸ್ವಾಮೀಜಿಯ ಮೇಲೆ ಕಾನೂನು ಕ್ರಮ ಕೈಗೊಂಡಾಗ, ಮಠದಿಂದ ಹೊರ ಬಿದ್ದ ಅದೆಷ್ಟೋ ಮಕ್ಕಳ ಪೈಕಿ ನನ್ನ ಇಬ್ಬರು ಮಕ್ಕಳು ಹಾಗೂ ನಾನು ಇದ್ದೆವು. ಮಠದಿಂದ ಹೊರದಬ್ಬಲ್ಪಟ್ಟು, ಅನ್ನ ,ಆಹಾರ, ಆಸರೆ ಇಲ್ಲದಂತಾದಾಗ, ಸತ್ಯವನ್ನು ಹೇಳಲು, ಯಾರ ಸಹಾಯವನ್ನೂ ಪಡೆಯದೆ ಬರಬೇಕಿತ್ತು ಎಂದು ಅಧಿಕಾರಿಗಳು ಹಾಗೂ ಈ ಸಮಾಜ ಬಯಸುವುದು ಕ್ರೂರತನವಲ್ಲವೇ?
ಇಂದು ನಾನು ನನ್ನ ಮಕ್ಕಳಿಗಾದ ಅನ್ಯಾಯದ ವಿರುದ್ಧ ದೂರು ನೀಡಿರುವುದು ಹಾಗೂ ನನಗೆ ಸತ್ಯ ಹೇಳಲು ಸಹಾಯ ಮಾಡಿರುವ ಕೆಲವು ಜನರ ಕರುಣೆ ಹಾಗೂ ಸಹಾನುಭೂತಿ ಶಿಕ್ಷೆಗೆ ಒಳಗಾಗುತ್ತಿದೆ. ತನ್ನ ಹಾಗೂ ತನ್ನ ಮಕ್ಕಳ ಶೀಲವನ್ನು ಅಡವು ಇಟ್ಟು ಸುಳ್ಳು ಹೇಳಿ ದಕ್ಕಿಸಿಕೊಳ್ಳುವುದು ಬಡ ತಾಯಿ ಒಬ್ಬಳಿಗೆ ಸಾಧ್ಯವೇ? ಇದು ಸತ್ಯಕ್ಕೆ ಮಾಡಿರುವ ಅವಮಾನ. ಮಕ್ಕಳನ್ನು ರಕ್ಷಿಸಲು ಮಾಡಿರುವ ರಾಷ್ಟ್ರೀಯ ಕಾನೂನಿಗೆ ಮಾಡಿರುವ ಅವಮಾನ. ಸತ್ಯ ಹೇಳಿರುವ ಕಾರಣಕ್ಕೆ ನನ್ನ ಹಾಗೂ ಸತ್ಯದ ಪರ ನಿಂತವರ ಮೇಲೆ ಕಾನೂನು ಜರುಗಿಸಿ ಅನುಮಾನಿಸಲಾಗಿದೆ ಹಾಗೂ ಅವಮಾನಿಸಲಾಗಿದೆ ಮಾನ್ಯ ಪ್ರಧಾನ ಮಂತ್ರಿಗಳ ಆಶಯದ ಘೋಷಣೆಯಾದ ಬೇಟಿ ಬಚಾವೋ ಬೇಟಿ ಪಢಾವೋ ಇವರುಗಳ ಕೈಯಲ್ಲಿ ನಗೆಪಾಟಲಾಗುತ್ತಿದೆ. ಪೊಲೀಸರ ಈ ನಡೆಯ ಮೂಲಕ ನೊಂದ ಮಕ್ಕಳ ಘನತೆಯನ್ನು ಮತ್ತಷ್ಟು ತಗ್ಗಿಸಿದ್ದಾರೆ.
“ಸ್ವಾಮೀಜಿಯಿಂದ ಯಾವ ಕೆಟ್ಟ ಕೃತ್ಯವು ನಡೆದಿಲ್ಲ. ಎಲ್ಲಾ ನಿಮ್ಮ ಮಕ್ಕಳ ಹಾಗೂ ನಿಮ್ಮ ಷಡ್ಯಂತ್ರ” ಎಂದು ಕೆಲವು ಅಧಿಕಾರಿಗಳು ನಿರ್ಧಾರಕ್ಕೆ ಬಂದಂತಿದ್ದಾರೆ. ನಮ್ಮಂತಹ ಬಡ ಹೆಣ್ಣು ಮಕ್ಕಳು ನ್ಯಾಯ ಕೇಳಲು ಹೊರ ಬರಬಾರದು. ಬಂದರೆ ಹೇಳು ತೀರದ ನೋವು ಹಾಗೂ ಭಯವನ್ನು ಅನುಭವಿಸುತ್ತಾ ಕತ್ತಲಲ್ಲೇ ಕೊಳೆಯಬೇಕಾಗಿದೆ. ಮಕ್ಕಳನ್ನು ರಕ್ಷಿಸಿ ಅವರನ್ನು ಶಾಲೆಗೆ ಕಳುಹಿಸುವುದು ತಪ್ಪಾಗಿ ಕಾಣಿಸುತ್ತಿದೆ.
ಈ ದೇಶದ ಲಕ್ಷಾಂತರ ನೊಂದ ಹೆಣ್ಣು ಮಕ್ಕಳ ಪರವಾಗಿ ನಮ್ಮ ದೇಶದ ತಾಯಿಯಾದ ತಮ್ಮಲ್ಲಿಗೆ ಮೊರೆ ಇಡುತ್ತಿದ್ದೇನೆ. ದಯಮಾಡಿ ನನ್ನ ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ನನಗೂ ನನ್ನ ಮಕ್ಕಳಿಗೂ ನ್ಯಾಯ ನೀಡುವುದರ ಮೂಲಕ ಘನತೆಯ ಬಾಳನ್ನು ನಿರ್ಮಿಸಿ ಕೊಡಬೇಕಾಗಿ ಸೆರಗೊಡ್ಡಿ ಪ್ರಾರ್ಥಿಸುತ್ತೇನೆ. ಇಲ್ಲವಾದರೆ ಈ ನರಕದಿಂದ ಮುಕ್ತರಾಗಲು ದಯಾ ಮರಣವನ್ನಾದರೂ ದಯಪಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಕ್ಷಮೆ ಇರಲಿ. ಒಬ್ಬ ತಾಯಿಯ ಒಡಲ ಉರಿಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ ಹೊರತು ಘನತೆವೆತ್ತ ರಾಷ್ಟ್ರಪತಿಗಳಾದ ತಮಗೆ ನೋವನ್ನುಂಟುಮಾಡಲಿಕ್ಕಾಗಲಿ, ಅಗೌರವ ಸೂಚಿಸುವುದಕ್ಕಾಗಲಿ ಅಲ್ಲವೆಂದು ಕೈಮುಗಿದು ಹೇಳುತ್ತೇನೆ. ಕರುಣಾಮಯಿ ಹಾಗೂ ತಾಯಿತನ ಉಳ್ಳ ರಾಷ್ಟ್ರಪತಿಗಳಾದ ತಾವು ಈ ಹೆಣ್ಣು ಮಕ್ಕಳ ನೋವನ್ನ ಅರಿತು ನಮಗೆ ರಕ್ಷಣೆ ಹಾಗೂ ನ್ಯಾಯವನ್ನು ದೊರಕಿಸಿ ಕೊಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ.
ಇದನ್ನೂ ಓದಿ | Murugha seer case | ಕಾಮಕಾಂಡ ಬಯಲಿಗೆಳೆದ ಒಡನಾಡಿ ಬಾಯಿ ಮುಚ್ಚಿಸಲು 3 ಕೋಟಿ ರೂ. ಆಫರ್, ಮಂತ್ರಿಯ ಮಧ್ಯಸ್ಥಿಕೆ?