Site icon Vistara News

Murugha Seer | ಪ್ರಚೋದನೆ, ಕಳವು ಪ್ರಕರಣದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ ಬಂಧನ; 4 ದಿನ ಕಸ್ಟಡಿಗೆ

basavarajan arrest

ಚಿತ್ರದುರ್ಗ/ಮೈಸೂರು: ಮುರುಘಾ ಮಠದ ಮುರುಘಾ ಶರಣರ (Murugha Seer) ವಿರುದ್ಧ ಪಿತೂರಿ ನಡೆಸಿದ ಹಾಗೂ ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೊ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ ಬಸವರಾಜನ್ ಅವರನ್ನು ಬಂಧನವಾಗಿದ್ದು, ೪ ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶಿಸಿದೆ.

ಬಸವರಾಜನ್‌ರನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವ ಪೊಲೀಸರು

ಇಲ್ಲಿನ 1ನೇ ಹೆಚ್ಚುವರಿ ನ್ಯಾಯಾಲಯದ ಎದುರು ಎಸ್‌.ಕೆ. ಬಸವರಾಜನ್‌ ಅವರನ್ನು ಪೊಲೀಸರು ಹಾಜರುಪಡಿಸಿದ್ದು, 10 ದಿನ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜನ್ ಪರ ವಕೀಲರು, ಅದರ ಅಗತ್ಯವಿಲ್ಲ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಬಸವರಾಜನ್‌ ಅವರನ್ನು ೪ ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಠಾಣೆಗೆ ಅವರನ್ನು ಸ್ಥಳಾಂತರ ಮಾಡಲಾಗಿದೆ.

ಏನಿದು ಪ್ರಕರಣ?
ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಸುಳ್ಳು ದೂರು ನೀಡಲು ಪ್ರಚೋದನೆ ನೀಡುವ ಮೂಲಕ ಮುರುಘಾ ಮಠದ ಮುರುಘಾ ಶರಣರ ಬಂಧನದ ಹಿಂದೆ ಪಿತೂರಿ ನಡೆಸಿದ ಆರೋಪ ಹೊತ್ತಿರುವ ಬಸವರಾಜೇಂದ್ರನನ್ನು ಗುರುವಾರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಇದರ ಹಿಂದೆ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಇದ್ದಾರೆಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ ಎಂಬ ಅಂಶ ತಿಳಿದುಬಂದಿದೆ. ಬಸವರಾಜನ್‌ ಹೆಸರನ್ನು ಬಸವರಾಜೇಂದ್ರ ಬಾಯಿಬಿಡುತ್ತಿದ್ದಂತೆ ಗುರುವಾರ (ನ.೧೦) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ | Murugha seer case | ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲು ಬಾಲಕಿಯನ್ನು ಪ್ರಚೋದಿಸಿದ ಬಸವರಾಜೇಂದ್ರ ವಶಕ್ಕೆ

ಬಂಧಿತ ಬಸವರಾಜೇಂದ್ರ

ಬಸವರಾಜನ್ ಅವರನ್ನು ಮೊದಲು ನಗರಠಾಣೆಗೆ ಕರೆತಂದು ಅಲ್ಲಿ ಕೆಲವೊಂದು ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಬಳಿಕ ಅವರನ್ನು ಪೊಲೀಸ್ ಗೆಸ್ಟ್‌ ಹೌಸ್‌ಗೆ ಸ್ಥಳಾಂತರ ಮಾಡಿ ಅಲ್ಲಿ ವಿಚಾರಣೆ ನಡೆಸಲಾಯಿತು. ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಬಸವರಾಜನ್‌ ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ.

ಪೊಲೀಸ್ ಗೆಸ್ಟ್‌ಹೌಸ್‌ನಿಂದ ಬಸವರಾಜನ್‌ರನ್ನು ಜಿಲ್ಲಾಸ್ಪತ್ರೆಗೆ ಕರೆತಂದ ಪೊಲೀಸರು ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಯನ್ನು ಪೂರೈಸಿದರು. ಬಳಿಕ ಅಲ್ಲಿಂದ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆಡಿಯೊ ಹಿಂದೆ ಬಸವರಾಜನ್‌ ಕೈವಾಡ?
ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ಅಭ್ಯಾಸ ಮಾಡಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿದ್ದ ಬಸವರಾಜೇಂದ್ರ, ಮಾಜಿ ಶಾಸಕ ಬಸವರಾಜನ್‌ ಹೆಸರನ್ನು ಬಾಯಿಬಿಟ್ಟಿರುವುದರ ಜತೆಗೆ ಅವರ ಪತ್ನಿ ಸೌಭಾಗ್ಯ ಹೆಸರನ್ನೂ ಹೇಳಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೌಭಾಗ್ಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ | Murugha Seer | ಪರಿಶಿಷ್ಟ ಬಾಲಕಿ ಮೇಲೆ ದೌರ್ಜನ್ಯ, ಧಾರ್ಮಿಕ ಸಂಸ್ಥೆ ದುರುಪಯೋಗ: ಮುರುಘಾ ಶರಣರ ವಿರುದ್ಧ ಟೈಟ್‌ ಚಾರ್ಜ್‌ಶೀಟ್‌

ಬಸವರಾಜನ್‌ಗೆ ೨ ಪ್ರಕರಣಗಳ ಉರುಳು?
ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್‌ ಈಗ ಮಠದ ರಾಜಾಂಗಣದಲ್ಲಿದ್ದ ಫೋಟೊ ಕಳ್ಳತನ ಪ್ರಕರಣ ಹಾಗೂ ಬಾಲಕಿಗೆ ಸುಳ್ಳು ದೂರು ನೀಡಲು ಪ್ರಚೋದನೆ ನೀಡಿರುವ ಕೇಸ್‌ನ ಮಾಸ್ಟರ್‌ ಮೈಂಡ್‌ ಎನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಎರಡೂ ಕೇಸ್‌ ಇವರಿಗೆ ಉರುಳಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಅಡುಗೆ ಸಹಾಯಕಿ ವಿಚಾರಣೆ
ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿ ಹಾಲಿ ಮೈಸೂರಿನ ಒಡನಾಡಿ ಸಂಸ್ಥೆಯ ರಕ್ಷಣೆಯಲ್ಲಿರುವ ಇಬ್ಬರು ಬಾಲಕಿಯರ ತಾಯಿ, ಅಡುಗೆ ಸಹಾಯಕಿಯನ್ನು ಪೊಲೀಸರು ಆಡಿಯೊ ವೈರಲ್‌ ವಿಚಾರವಾಗಿ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಗೆ ಭೇಟಿ ಬೆಳಗ್ಗೆ ೧೧ ಗಂಟೆಗೆ ಭೇಟಿ ನೀಡಿದ ಚಿತ್ರದುರ್ಗ ಪೊಲೀಸರು, ನಿರ್ದೇಶಕರಾದ ಪರಶುರಾಮ್, ಸ್ಟ್ಯಾನ್ಲಿ, ಇಬ್ಬರು ಆಪ್ತ ಸಮಾಲೋಚಕರ ಸಹಿತ ಅಡುಗೆ ಸಹಾಯಕಿ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆನ್ನಲಾಗಿದೆ.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ? ಅಥವಾ ಯಾರಾದರೂ ಆಮಿಷವೊಡ್ಡಿ ಸುಳ್ಳು ದೂರು ದಾಖಲಿಸಲು ಪ್ರಚೋದನೆ ನೀಡಿದರೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆನ್ನಲಾಗಿದೆ. ಈ ಪ್ರಕರಣ ಸಂಬಂಧ ೧೬೧ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಒಟ್ಟು ೪ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಹೇಳಿಕೆಗಳನ್ನು ಪತ್ರದಲ್ಲಿ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಲ್ಯಾಪ್‌ಟಾಪ್‌ನಲ್ಲೂ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

ಸಂತ್ರಸ್ತೆ ತಾಯಿ ಚಿತ್ರದುರ್ಗಕ್ಕೆ ಶಿಫ್ಟ್‌
ವಿಚಾರಣೆ ಪೂರ್ಣಗೊಂಡ ಬಳಿಕ ಅಡುಗೆ ಸಹಾಯಕಿಯನ್ನು ಚಿತ್ರದುರ್ಗಕ್ಕೆ ಪೊಲೀಸರು ಕರೆದೊಯ್ದರು. ನಾಲ್ವರು ಮಹಿಳಾ ಸಿಬ್ಬಂದಿ ಜತೆಗೆ ಮಹಿಳೆಯನ್ನು ಕರೆದೊಯ್ಯಲಾಗಿದೆ. ಈ ವೇಳೆ ಒಡನಾಡಿ ಸಂಸ್ಥೆಯ ನಾಲ್ವರೂ ಜತೆಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ | Murugha Seer | ಮುರುಘಾ ಮಠದಲ್ಲಿದ್ದ ಫೋಟೊ ಕಳವಿಗೆ ಸೂಚಿಸಿದ್ದು ಬಸವರಾಜನ್‌ ದಂಪತಿ; ಬಾಯ್ಬಿಟ್ಟ ಬಂಧಿತರು!

Exit mobile version