ಚಿತ್ರದುರ್ಗ: ಮುರುಘಾ ಶರಣರ (Murugha Seer) ಬಂಧನದ ಬಳಿಕ ಮುರುಘಾ ಮಠದೊಳಗೆ ಇದ್ದ ೪೭ ಫೋಟೊಗಳನ್ನು ಕಳವು ಮಾಡಿದ್ದ ಪ್ರಕರಣ ಸಂಬಂಧ ಬಂಧಿತರಾಗಿರುವ ಇಬ್ಬರು ಆರೋಪಿಗಳು, ಇದರ ಹಿಂದೆ ಮಠದ ಹಿಂದಿನ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ದಂಪತಿ ಇದ್ದಾರೆಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಮುರುಘಾ ಮಠದ ರಾಜಾಂಗಣದ ಗೋಡೆಯಲ್ಲಿ ಮುರುಘಾ ಶರಣರ ಜತೆಗೆ ವಿವಿಧ ರಾಜಕಾರಣಿಗಳು, ಮುಖಂಡರು ತೆಗೆಸಿಕೊಂಡಿದ್ದ ಫೋಟೊಗಳನ್ನು ನೇತು ಹಾಕಲಾಗಿತ್ತು. ಅಲ್ಲಿದ್ದ ಸುಮಾರು 47 ಫೋಟೊಗಳನ್ನು ಅಕ್ಟೋಬರ್ 6ರಂದು ಕಳವು ಮಾಡಲಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು, ಕೊನೆಗೆ ನ.7ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಎಂಬಿಬ್ಬರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳಿಬ್ಬರು ಫೋಟೊ ಕದಿಯುವುದರ ಹಿಂದಿನ ಪ್ರಭಾವಿಗಳ ಹೆಸರನ್ನು ಬಾಯಿಬಿಟ್ಟಿದ್ದಾರೆ.
ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ಸೂಚನೆ ಮೇರೆಗೆ ತಾವು ಕಳ್ಳತನ ಮಾಡಿದ್ದಾಗಿ ಪೊಲೀಸರ ಎದುರು ವಿಷಯವನ್ನು ಹೇಳಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಫೋಟೊ ಕಳವು ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಇದನ್ನೂ ಓದಿ | Murugha Seer | ಮುರುಘಾಶ್ರೀ ವಿರುದ್ಧ ಸುಳ್ಳು ದೂರು ಕೊಡಲು ಬಾಲಕಿಗೆ ಪ್ರಚೋದನೆ; ಆಡಿಯೊ ವೈರಲ್!