ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀಗಳಿಗೆ (Murugha Seer) ಪೋಕ್ಸೊ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದ್ದು, ಅವರಿಗೆ ನಾಲ್ಕು ತಿಂಗಳು ನ್ಯಾಯಾಂಗ ಬಂಧನ ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು, ಆದರೆ ಇದೀಗ ಸುಪ್ರೀ ಆದೇಶದ ಹಿನ್ನೆಲೆಯಲ್ಲಿ ಶ್ರೀಗಳ ಜಾಮೀನು 4 ತಿಂಗಳ ಮಟ್ಟಿಗೆ ರದ್ದಾಗಲಿದೆ.
ವಿಚಾರಣಾ ನ್ಯಾಯಾಲಯದ ಮುಂದೆ ಒಂದು ವಾರದೊಳಗೆ ಹಾಜರಾಗಲು ಶರಣಾಗಲು ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ನೀಡಿದೆ. ಹಾಗೆಯೇ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಚಿತ್ರದುರ್ಗದ ಕೋರ್ಟ್‌ಗೆ ಸುಪ್ರೀಂ ಸೂಚನೆ ನೀಡಿದ್ದು, ಸಾಕ್ಷ್ಯಗಳ ವಿಚಾರಣೆ ಮುಗಿಯುವ ತನಕ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ತಿಳಿಸಿದೆ.
ಡಿ.ರಾಜಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ಹೊರಡಿಸಲಾಗಿದ್ದು, ಪ್ರಾಸಿಕ್ಯೂಷನ್ ಮತ್ತು ಆರೋಪಿ ಎಲ್ಲರೂ ಕೂಡ ವಿಚಾರಣೆಗೆ ಸಹಕರಿಸಬೇಕು. ವಿಚಾರಣೆ ನ್ಯಾಯಾಲಯವು 4 ತಿಂಗಳಲ್ಲಿ ವಿಚಾರಣೆ ಮುಗಿಸಬೇಕು. ಇನ್ನೂ ಹೆಚ್ಚು ಸಮಯ ಅಗತ್ಯ ಬಿದ್ದಲ್ಲಿ, ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ | Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ
ಕಳೆದ ನವೆಂಬರ್‌ನಲ್ಲಿ 2ನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾಶ್ರೀಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಬಂಧನವಾದ ಕೆಲವೇ ನಿಮಿಷಗಳಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಉಚ್ಚ ನ್ಯಾಯಾಲಯ ಆದೇಶಿಸಿತ್ತು. ಮೊದಲ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಐದೇ ದಿನಗಳಲ್ಲಿ 2ನೇ ಪೋಕ್ಸೊ ಪ್ರಕರಣದಲ್ಲಿ ಶ್ರೀಗಳನ್ನು ಮತ್ತೆ ಬಂಧಿಸಲಾಗಿತ್ತು. ಚಿತ್ರದುರ್ಗ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಶ್ರೀಗಳ ಬಿಡುಗಡೆಗೆ ಹೈಕೋರ್ಟ್ ಸೂಚಿಸಿತ್ತು.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಎರಡು ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣವಾದರೆ ಎರಡನೇ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಜತೆಗೆ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಎಂಬುದನ್ನು ಉಲ್ಲೇಖಿಸಲಾಗಿತ್ತು. ಮೊದಲ ಪ್ರಕರಣದಲ್ಲಿ ಪೋಕ್ಸೊ ಪ್ರಕರಣ ಮಾತ್ರ ಇದ್ದರೆ, ಎರಡನೇ ಕೇಸ್‌ನಲ್ಲಿ ಪೋಕ್ಸೋ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯೂ ಅನ್ವಯವಾಗಿದೆ.