ಚಿತ್ರದುರ್ಗ: ಇಲ್ಲಿನ ಪ್ರತಿಷ್ಠಿತ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯರು ಇಂದು ನ್ಯಾಯಾಲಯದ ಮುಂದೆ ಹಾಜರು ಆಗುವ ಸಾಧ್ಯತೆ ಇದೆ.
ಸಂತ್ರಸ್ತ ಬಾಲಕಿಯರು ನ್ಯಾಯಾಧೀಶರ ಮುಂದೆ ಸೆ.164 ಹೇಳಿಕೆ ದಾಖಲು ಮಾಡಲಿದ್ದಾರೆ. ಸಂತ್ರಸ್ತ ಬಾಲಕಿಯರಿಗೆ ನಿನ್ನೆ ಸಂಜೆ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಸಂತ್ರಸ್ತರ ಸೆ.164 ಹೇಳಿಕೆ ದಾಖಲು ಸಮಯದಲ್ಲೇ ವೈದ್ಯಕೀಯ ವರದಿ ನೀಡುವ ಸಾಧ್ಯತೆಯಿದ್ದು, ವೈದ್ಯಕೀಯ ಪರೀಕ್ಷೆ ವರದಿ, ಸಂತ್ರಸ್ತರ ಸೆ.161, ಸೆ.164 ಹೇಳಿಕೆ ಸಾಮ್ಯತೆ ಇದ್ದರೆ ಶ್ರೀಗಳಿಗೆ ಕಂಟಕ ಖಚಿತ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಶರಣರು ಹಾಗೂ ಮಠದ ಆಪ್ತರು ನಿನ್ನೆ ರಾತ್ರಿ ವಕೀಲರ ಜೊತೆ ಸಮಾಲೋಚನೆ ಮಾಡಿದ್ದಾರೆ.
ಒಂದು ವೇಳೆ ನ್ಯಾಯಾಲಯದಿಂದ ಶರಣರಿಗೆ ನೋಟಿಸ್ ಜಾರಿಯಾದರೆ ಅದನ್ನು ಎದುರಿಸುವುದು, ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತಿಸಲಾಗಿದೆ. ಬಂಧನದ ಭೀತಿ ಎದುರಾದರೆ ಆಸ್ಪತ್ರೆಗೆ ದಾಖಲಾಗುವಂತೆ ವಕೀಲರು ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದೆ. ಪೋಕ್ಸೋ ಜಾಮೀನು ರಹಿತ ಪ್ರಕರಣ ಆಗಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ದಾರಿಯೊಂದೇ ಶ್ರೀಗಳ ಮುಂದೆ ಉಳಿದಿದೆ. ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದಲೇ ವಿಚಾರಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮುರುಘಾ ಶರಣರ ಮುಂದಿನ ಭವಿಷ್ಯ ಇಂದು ಮಧ್ಯಾಹ್ನದ ಒಳಗೆ ನಿರ್ಧಾರವಾಗಲಿದೆ.
ಇದನ್ನೂ ಓದಿ | Murugha Shri | ಬಾಲಕಿಯರ ಮೆಡಿಕಲ್ ಟೆಸ್ಟ್, ಸೋಮವಾರ ಜಡ್ಜ್ ಮುಂದೆ ಹೇಳಿಕೆ; ಮುರುಘಾಶ್ರೀ ಬಂಧನ ಆಗುತ್ತಾ?