Site icon Vistara News

ಮುರುಘಾಶ್ರೀ ಪ್ರಕರಣ| ಶ್ರೀಗಳ ಪರವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ, ನಡೆಯದ ತುರ್ತು ವಿಚಾರಣೆ, ಸೆ. 1ಕ್ಕೆ ಮುಂದೂಡಿಕೆ

ಮುರುಘಾಶ್ರೀಗಳಿಗೆ

ಚಿತ್ರದುರ್ಗ: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾ ಮಠದ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾಶರಣರ ಪರವಾಗಿ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಸಲ್ಲಿಸಲಾಗಿದೆ.

ಮಠದ ಪರ ವಕೀಲರಾಗಿರುವ ಕೆ.ಎನ್‌. ವಿಶ್ವನಾಥಯ್ಯ ಅವರು ಸೋಮವಾರ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ, ಕೋರ್ಟ್‌ ತ್ವರಿತ ವಿಚಾರಣೆಯನ್ನು ನಡೆಸಲಿಲ್ಲ. ಬದಲಾಗಿ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ ೧ಕ್ಕೆ ಮುಂದೂಡಿದೆ. ಇದು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯಿದೆ(ಪೋಕ್ಸೊ)ಯಡಿ ದಾಖಲಾಗಿರುವ ಪ್ರಕರಣವಾಗಿರುವುದರಿಂದ ಯಾವುದೇ ಕ್ಷಣ ಶ್ರೀಗಳ ಬಂಧನ ನಡೆಯಬಹುದು ಎಂಬ ಪರಿಸ್ಥಿತಿ ಇದೆ. ಹೀಗೊಂದು ವೇಳೆ ಆದರೆ ಅವರಿಗೆ ಯಾವುದೇ ಕಾನೂನಿನ ರಕ್ಷಣೆ ಇರುವುದಿಲ್ಲ. ಕೋರ್ಟ್‌ ಕೂಡಾ ಇಂತಹುದೇ ಸಾಧ್ಯತೆಯನ್ನು ಮನಗಂಡು ವಿಚಾರಣೆಗೆ ಅವಸರ ಮಾಡಿಲ್ಲ ಎನ್ನಲಾಗುತ್ತಿದೆ.

ವಿದ್ಯಾರ್ಥಿನಿಯರು ಸಲ್ಲಿಸಿದ ದೂರನ್ನು ಆಧರಿಸಿ ಪೊಲೀಸರು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರಿಂದ ವೈಯಕ್ತಿಕ ಹೇಳಿಕೆ ದಾಖಲು, ನ್ಯಾಯಾಧೀಶರ ಮುಂದೆ ಹೇಳಿಕೆ ಜತೆಗೆ ಅವರನ್ನು ಕರೆ ತಂದು ಮಠದಲ್ಲಿ ಮಹಜರು ನಡೆಸಲಾಗಿದೆ. ಈ ಪ್ರಕ್ರಿಯೆಗಳೆಲ್ಲವೂ ಪೋಕ್ಸೋ ಕಾಯಿದೆಯಡಿ ನಡೆಸಬೇಕಾದ ಅಗತ್ಯ ಕ್ರಮಗಳೇ ಆಗಿವೆ. ಇದೇ ರೀತಿ ಮುಂದುವರಿದರೆ ಶ್ರೀಗಳ ಬಂಧನವೂ ನಡೆಯಬಹುದು ಎಂಬ ಅಭಿಪ್ರಾಯವಿದೆ.
ಈ ನಡುವೆ ಸೋಮವಾರ ಮುಂಜಾನೆ ಶ್ರೀಗಳು ಮಠ ಬಿಟ್ಟು ಮಹಾರಾಷ್ಟ್ರದ ಕಡೆಗೆ ವಕೀಲರೊಬ್ಬರ ಜತೆ ಮಾತನಾಡಲು ತೆರಳಿದ್ದರು ಎಂದು ಹೇಳಲಾಗಿತ್ತು. ಬಳಿಕ ಮಠಕ್ಕೆ ಮರಳಿದ್ದ ಅವರು ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಈ ಸಂಘರ್ಷದಲ್ಲಿ ತಾನು ಗೆದ್ದುಬರುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಒಬ್ಬರ ಪರವಾಗಿ ಮಾತ್ರ ಜಾಮೀನಿಗೆ ಅರ್ಜಿ
ಈ ಪ್ರಕರಣದಲ್ಲಿ ಶ್ರೀಗಳು ಸೇರಿದಂತೆ ಒಟ್ಟು ಐವರ ಮೇಲೆ ಕೇಸು ದಾಖಲಾಗಿದೆ. ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್‌ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್‌ ಗಂಗಾಧರ್‌ ಮತ್ತು ಲೀಡರ್‌ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ. ಆದರೆ, ವಕೀಲ ವಿಶ್ವನಾಥ್‌ ಅವರು ಶ್ರೀಗಳ ಪರವಾಗಿ ಮಾತ್ರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ.

ಮುರುಘಾ ಮಠಕ್ಕೆ ಜ್ಯೋತಿ ಪ್ರಕಾಶ್ ಮಿರ್ಜಿ ಭೇಟಿ
ಈ ನಡುವೆ, ಬೆಂಗಳೂರಿನ ನಿವೃತ್ತ ಪೊಲೀಸ್‌ ಕಮೀಷನರ್‌ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಸೋಮವಾರ ಮುರುಘಾಮಠಕ್ಕೆ ಭೇಟಿ ನೀಡಿದರು. ಸ್ಥಳ ಮಹಜರು ನಡೆಯುವ ಸಮಯದಲ್ಲೇ ಭೇಟಿ ನೀಡಿದ್ದರಿಂದ ಸ್ವಲ್ಪ ಹೊತ್ತು ಅವರು ಹೊರಗೆ ಕಾಯಬೇಕಾಯಿತು. ಪ್ರಕರಣದ ಬಗ್ಗೆ ಮಿರ್ಜಿ ಅವರಿಗೆ ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದರು.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ಬಾಲಕಿಯರ ಸಮ್ಮುಖ ಮಠದಲ್ಲಿ ಮಹಜರು, ಹೊರ ಕಳುಹಿಸಿದ್ದಕ್ಕೆ ಭಕ್ತರ ಆಕ್ರೋಶ

Exit mobile version