Site icon Vistara News

ಮುರುಘಾಶ್ರೀ ಪ್ರಕರಣ | ಇಂದು ಶ್ರೀಗಳ ಜಾಮೀನು ಅರ್ಜಿ ಸಲ್ಲಿಕೆ, ಕಸ್ಟಡಿಗೆ ಕೇಳಲಿದ್ದಾರೆ ಪೊಲೀಸರು

murugha sree

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಚಿತ್ರದರ್ಗದ ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ಹಾಗೂ ಶ್ರೀಗಳ ಮುಂದಿನ ನಡೆ ಕುತೂಹಲಕಾರಿಯಾಗಿದೆ.

ಸದ್ಯ ಶ್ರೀಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಂದು‌ ಶ್ರೀಗಳ ಪರ ವಕೀಲರು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗೆ 11 ಗಂಟೆಗೆ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಶ್ರೀಗಳ‌ನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಲು ಒಪ್ಪಿಸುವಂತೆ ಪೊಲೀಸರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಶ್ರೀಗಳನ್ನು ವಶಕ್ಕೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಿದರೆ ತಕರಾರು ಅರ್ಜಿ ಸಲ್ಲಿಸಲು ಶ್ರೀಗಳ ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ನಂತರ ಕೋರ್ಟ್ ಕಲಾಪಗಳು ಆರಂಭವಾಗಲಿವೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮನವಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುವ ಅವಕಾಶವೂ ಶ್ರೀಗಳ ಮುಂದಿದೆ. ಆದರೆ, ಈಗಾಗಲೇ ಭಾರಿ ಸುದ್ದಿ ಮಾಡಿರುವ ಪ್ರಕರಣದಲ್ಲಿ ಇನ್ನಷ್ಟು ಅಪಖ್ಯಾತಿಗೆ ತುತ್ತಾಗಲು ಶ್ರೀಗಳು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ, ಆಸ್ಪತ್ರೆವಾಸ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳ ಕೇಸ್‌ ತೆಗೆದುಕೊಂಡ ವಕೀಲ ಶಂಕರಪ್ಪ ಸಿಪಿಐ(ಎಂ)ನಿಂದ ಉಚ್ಚಾಟನೆ!

ಬಂಧನ ಹಿನ್ನೆಲೆಯಲ್ಲಿ ಮುರುಘಾ ಮಠದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಠದ ಆವರಣದೊಳಗಡೆ ಯಾರನ್ನೂ ಬಿಡದೆ, ಮಠದ ಸಿಬ್ಬಂದಿಗಳಿಗೆ ಮಾತ್ರ ಒಳಗಡೆ ಹೋಗಲು ಅವಕಾಶ ನೀಡಲಾಗುತ್ತಿದೆ. ಮಠದ ಬಳಿ ಭಕ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ.

ಗುರುವಾರ ರಾತ್ರಿಯ ಹೈಡ್ರಾಮಾ

ಗುರುವಾರ ರಾತ್ರಿ ಮುರುಘಾಮಠ, ಚಳ್ಳಕೆರೆ ಡಿವೈಎಸ್‌ಪಿ ಕಚೇರಿ ಹಾಗೂ ನ್ಯಾಯಾಲಯದ ಮುಂದೆ ಹೈಡ್ರಾಮಾ ನಡೆದಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಶ್ರೀಗಳನ್ನು ಬಂಧಿಸಿದ್ದ ಪೊಲೀಸರು, ಚಳ್ಳಕೆರೆ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು. ವಿಚಾರಣೆ ನಂತರ ಶ್ರೀಗಳನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ವೈದ್ಯಕೀಯ ತಪಾಸಣೆಯ ವರದಿ ಬಂದ ಬಳಿಕ, ರಾತ್ರಿ 2.30ರ ಸುಮಾರಿಗೆ ಶ್ರೀಗಳನ್ನು ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶೆ ಕೋಮಲಾ ಅವರ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಶ್ರೀಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುರುಘಾಶರಣರಿಗೆ 14 ದಿನ ನ್ಯಾಯಾಂಗ ಬಂಧನ!

Exit mobile version