Site icon Vistara News

Murugha Sree case | ಅಡುಗೆ ಸಹಾಯಕಿ, ಮಕ್ಕಳು ನಾಳೆ ಚಿತ್ರದುರ್ಗಕ್ಕೆ, ಶ್ರೀಗಳ ಪದತ್ಯಾಗಕ್ಕೆ ಹೆಚ್ಚಿದ ಒತ್ತಡ

murugha Sree POCSO ACT Sexual Assault Chitradurga Murugha matt

ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಕಳೆದ ಸೆಪ್ಟೆಂಬರ್‌ ೧ರಿಂದಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಾಲಿ ಅವರ ನ್ಯಾಯಾಂಗ ಬಂಧನ ಅವಧಿ ಅ.೨೧ರವರೆಗೆ ಇದೆ.

ಈ ನಡುವೆ, ಮುರುಘಾ ಶರಣರ ವಿರುದ್ಧ ಪೋಕ್ಸೊ ಪ್ರಕರಣದಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಈ ಆರೋಪ ಮಾಡಿರುವ ಮಠದ ಅಡುಗೆ ಸಹಾಯಕಿ ಹಾಗೂ ಆಕೆಯ ಅಪ್ರಾಪ್ತ ಮಕ್ಕಳನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತರುವ ಸಾಧ್ಯತೆಯಿದೆ.

ಬಾಲಕಿಯರಿಬ್ಬರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಸಿಆರ್ ಪಿಸಿ 164 ಹೇಳಿಕೆ ಸಹ ದಾಖಲಿಸಲಿದ್ದಾರೆ. ಪ್ರಕರಣದ ತನಿಖಾ ಭಾಗವಾಗಿ ದೂರುದಾರ ಮಹಿಳೆ ಮತ್ತು ಆಕೆಯ ಮಕ್ಕಳು ಚಿತ್ರದುರ್ಗಕ್ಕೆ ಬಂದ ನಂತರ ಮುರುಘಾ ಮಠದಲ್ಲಿ ಸ್ಥಳ ಮಹಜರು, ಬಾಲಕಿಯರಿಬ್ಬರ ಮೆಡಿಕಲ್ ಟೆಸ್ಟ್ ಸಹ ನಡೆಯಲಿದೆ.

ದೂರುದಾರ ಮಹಿಳೆ ತನ್ನ ಮಕ್ಕಳ ಮೇಲಲ್ಲದೆ ಇತರ ಬಾಲಕಿಯರ ಮೇಲೂ ದೌರ್ಜನ್ಯ ನಡೆದಿದೆ ಎಂದು ಬಾಲಕಿಯರಿಬ್ಬರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಳು. ಇದರಲ್ಲಿ ಒಬ್ಬ ಬಾಲಕಿಯ ಹೇಳಿಕೆ ದಾಖಲಾಗಿದ್ದು, ಅನ್ಯ ಜಿಲ್ಲೆಯಲ್ಲಿರುವ ಮತ್ತೊಬ್ಬ ಬಾಲಕಿಯ ಹೇಳಿಕೆ ದಾಖಲಿಸಲು ಪೊಲೀಸರು ಆ ಬಾಲಕಿಯನ್ನು ಕರೆಸುವಂತೆ ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಗೆ ಮನವಿ ಮಾಡಿದ್ದಾರೆ.

ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ
ಇನ್ನು ಮುರುಘಾ ಶರಣರ ಪೀಠತ್ಯಾಗಕ್ಕೂ ಲಿಂಗಾಯತ ಸಮಾಜದಲ್ಲಿಯೇ ಒತ್ತಡ ಹೆಚ್ಚಿದೆ. ಈಗಾಗಲೇ ವೀರಶೈವ ಮಹಾಸಭಾ ಮುಖಂಡರು ಸಹ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಬಗೆಗೂ ನಾಳೆ ಮತ್ತಷ್ಟು ಕೂಗು ಏಳುವ ಸಾಧ್ಯತೆಯಿದೆ.

ಭಾನುವಾರ ವೀರಶೈವ ಮುಖಂಡರ ಸಭೆಯೊಂದು ನಡೆದಿದ್ದು, ಇದರಲ್ಲಿ ಮಾತನಾಡಿದ ಎಲ್ಲರೂ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ, ವೀರಶೈವ ಮಹಾಸಭಾ ಜಿಲ್ಲಾದ್ಯಕ್ಷ ಮಹಡಿ ಶಿವಮೂರ್ತಿ, ʻʻಮುರುಘಾಶ್ರೀ ವಿರುದ್ಧ ಗಂಭೀರ ಆರೋಪವಿದೆ. ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಬಂಧನ ಆಗಿದೆ. ಮುರುಘಾಶ್ರೀ ಕೂಡಲೇ ಪೀಠ ತ್ಯಾಗ ಮಾಡಬೇಕು. ಅವರ ಬಂಧನದಿಂದಾಗಿ ಮಠದ ಆಡಳಿತ, ಧಾರ್ಮಿಕ ಆಚರಣೆಗೆ ತೊಂದರೆ ಆಗಿದೆ. ಸಮಾಜದ ಸಮ್ಮುಖದಲ್ಲಿ ಹೊಸ ಪೀಠಾಧ್ಯಕ್ಷರ ಆಯ್ಕೆ ಆಗಬೇಕು. ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅದ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಈಗಾಗಲೇ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಆಗಿ‌ ಮನವರಿಕೆ ಮಾಡಿದ್ದೇವೆ. ಸಿಎಂ, ಮಾಜಿ ಸಿಎಂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ | Murugha Sree case | ಬಸವಪ್ರಭು ಶ್ರೀಗಳಿಗೆ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ

Exit mobile version