ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಪ್ರಸಕ್ತ ಡಿವೈಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯನ್ನು ಪಡೆಯಲೆಂದು ಅವರನ್ನು ಕಸ್ಟಡಿಗೆ ಪಡೆದಿದ್ದು, ಸೆಪ್ಟೆಂಬರ್ ೫ರವರೆಗೆ ಅವರು ಕಸ್ಟಡಿಯಲ್ಲಿ ಇರುತ್ತಾರೆ. ಶನಿವಾರ ಮುಂಜಾನೆಯಿಂದಲೇ ಅವರ ವಿಚಾರಣೆ ಆರಂಭಗೊಂಡಿದ್ದು, ಡಿವೈಎಸ್‌ಪಿ ಅನಿಲ್ ಕುಮಾರ್ ಮತ್ತು ಎಸ್‌ಪಿ ಪರಶುರಾಮ್ ಅವರು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಗೆ ಮುನ್ನ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆದಿದೆ. ಮೂವರು ವೈದ್ಯರನ್ನು ಡಿವೈಎಸ್ಪಿ ಕಚೇರಿಗೇ ಕರೆಸಿಕೊಂಡು ತಪಾಸಣೆ ನಡೆಸಲಾಗಿದ್ದು, ಆರೋಗ್ಯ ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕವೇ ಪ್ರಶ್ನೆ ಮಾಡಲಾಗುತ್ತಿದೆ. ಒಂದು ವೇಳೆ ಆರೋಗ್ಯ ಏರುಪೇರು ಆದರೆ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಸಜ್ಜಾಗಿ ಇಡಲಾಗಿದೆ.
ಎಸ್ಪಿ ಮತ್ತು ಡಿವೈಎಸ್‌ಪಿ ಜಂಟಿಯಾಗಿ ಈ ವಿಚಾರಣೆಯನ್ನು ನಡೆಸುವರೆಂದು ಹೇಳಲಾಗಿದೆ. ಆದರೆ, ಎಸ್‌ಪಿ ಅವರು ಆರಂಭದಲ್ಲಿ ಮಾತ್ರ ಇದ್ದು, ಬಳಿಕ ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ಮುಂದುವರಿಸಲಿದ್ದಾರೆ ಎನ್ನಲಾಗುತ್ತಿದೆ.
ಮಠದಲ್ಲಿ ಇಂದೇ ಮಹಜರು ಸಾಧ್ಯತೆ
ಮುರುಘಾಶ್ರೀ ಅವರ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಸುತ್ತಿನ ಸ್ಥಳ ಮಹಜರು ಇಂದೇ ನಡೆಯುವ ನಿರೀಕ್ಷೆ ಇದೆ.
ಸ್ಥಳ ಮಹಜರು ಪ್ರಕ್ರಿಯೆ ಪ್ರಕಾರ, ಶ್ರೀಗಳನ್ನೇ ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಇಬ್ಬರು ಸರ್ಕಾರಿ ಪಂಚರ ಸಮ್ಮುಖದಲ್ಲಿ ತನಿಖಾಧಿಕಾರಿ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ. ಕೃತ್ಯ ನಡೆದ ಸ್ಥಳದಲ್ಲಿ ಯಾವುದಾದರೂ ಸಾಕ್ಷ್ಯ ಸಿಗುತ್ತದೆಯೇ ಎಂದು ಪರಿಶೀಲನೆ ನಡೆಸುತ್ತಾರೆ. ಸಾಕ್ಷ್ಯಗಳೇನಾದರೂ ಸಿಕ್ಕಿದರೆ ಕವರ್ ಒಳಗಡೆ ಹಾಕಿ ಸೀಲ್ ಮಾಡಲಾಗುತ್ತದೆ. ಇದನ್ನು 27ಬಿ ಅಡಿ ದಾಖಲು ಮಾಡಲಾಗುತ್ತದೆ. ಒಂದು ವೇಳೆ ಯಾವುದೇ ಸಾಕ್ಷ್ಯಗಳು ಸಿಗದೇ ಇದ್ದಾಗ ಅದನ್ನು ಖಾಲಿ ಮಹಜರು ಎಂದು ನಮೂದಿಸಲಾಗುತ್ತದೆ. ಅಂತ ನಮೂದಿಸುತ್ತಾರೆ. ಕೃತ್ಯ ನಡೆದ ಸ್ಥಳದ ನಾಲ್ಕು ದಿಕ್ಕುಗಳನ್ನು ತೋರಿಸಿ ಚೆಕ್ ಬಂದಿ ಬರೆಯಲಾಗುತ್ತದೆ.
ಮುರುಘಾ ಶ್ರೀ ಪ್ರಕರಣ | ಇಂದು ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ನಿರೀಕ್ಷೆ