ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಹೇಳಿಕೆ ದಾಖಲು ಪ್ರಕ್ರಿಯೆ ಮಂಗಳವಾರ ನಡೆಯಿತು. ಇದರ ಮುಂದಿನ ಭಾಗವಾಗಿ, ಈ ಹೇಳಿಕೆಗಳನ್ನು ಆಧರಿಸಿ ಗುರುವಾರ ಶ್ರೀಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಚಿತ್ರದುರ್ಗದ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿನಿಯರನ್ನು ಮಂಗಳವಾರ ಮಧ್ಯಾಹ್ನ ೩ ಗಂಟೆ ೫ ನಿಮಿಷಕ್ಕೆ 1ನೇ ಅಪರ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ನ್ಯಾಯಾಧೀಶರಾದ ಅನಿತಾ ಕುಮಾರಿ ಎಸ್ ಅವರ ಮುಂದೆ ಹೇಳಿಕೆಗಳನ್ನು ನೀಡಿದರು. ಒಬ್ಬ ಮಹಿಳಾ ಟೈಪಿಸ್ಟ್ ಮತ್ತು ಒಬ್ಬ ಒಬ್ಬ ಮಹಿಳಾ ಸಿಬ್ಬಂದಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿದೆ. ಕೋರ್ಟ್‌ನ ಹೊರಗಡೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.
ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೬೪ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿಡಿಯೊ ರೆಕಾರ್ಡಿಂಗ್ ಕೂಡಾ ನಡೆದಿದೆ. ಬಾಲಕಿಯರ ಹೇಳಿಕೆಯನ್ನು ಪಡೆದ ಬಳಿಕ ನ್ಯಾಯಾಧೀಶರ ಸಮ್ಮುಖದಲ್ಲೇ ರಕ್ತದ ಮಾದರಿಗಳನ್ನು ಸಂಗ್ರಹ ನಡೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ರಕ್ತ ಸಂಗ್ರಹ ನಡೆಸುತ್ತಾರೆ.
ಹೇಳಿಕೆ ತನಿಖಾಧಿಕಾರಿಗೆ ರವಾನೆ
ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಹೇಳಿಕೆಗಳ ಆಧಾರದಲ್ಲಿ ತನಿಖಾಧಿಕಾರಿಗಳು ಪ್ರಮುಖ ಆರೋಪಿಯಾಗಿರುವ ಮುರುಘಾ ಶರಣರ ಅಭಿಪ್ರಾಯ ಪಡೆಯಲು ನೋಟಿಸ್ ಜಾರಿ ಮಾಡಲಾಗುತ್ತದೆ. 164 ಅಡಿ ದಾಖಲಾಗುವ ಹೇಳಿಕೆಯ ಒಂದು ಪ್ರತಿ ಪ್ರಧಾನ ನ್ಯಾಯಾಧೀಶರ ಬಳಿ ಇರುತ್ತದೆ.
ಸೆಪ್ಟೆಂಬರ್ ೧ಕ್ಕೆ ನಿರ್ಣಾಯಕ ದಿನ
ಬುಧವಾರ ಸರ್ಕಾರಿ ರಜೆ ಕಾರಣ ಶ್ರೀಗಳಿಗೆ ಗುರುವಾರ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ, ಮುರುಘಾ ಶ್ರೀಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೂಡಾ ಸೆಪ್ಟೆಂಬರ್ ೧ರಂದೇ ನಡೆಯಲಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್ ಕೂಡಾ ದಾಖಲು