Site icon Vistara News

ಮುರುಘಾಶ್ರೀ ಪ್ರಕರಣಕ್ಕೆ Big twist: ಸಂತ್ರಸ್ತ ಬಾಲಕಿ 1 ತಿಂಗಳು ಬಸವರಾಜನ್‌ ಮನೆಲೇ ಇದ್ದಳು ಎಂದ ಚಿಕ್ಕಪ್ಪ

basavaraj- soubhagya couple

ಚಿತ್ರದುರ್ಗ: ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲಿನ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುರುಘಾಶರಣರ ಮೇಲೆ ಆಪಾದನೆ ಮಾಡಿರುವ ಇಬ್ಬರು ಬಾಲಕಿಯರು ಕಳೆದ ಜುಲೈ ೨೫ರಿಂದಲೂ ಎಸ್‌.ಕೆ. ಬಸವರಾಜನ್‌ ಮತ್ತು ಸೌಭಾಗ್ಯ ದಂಪತಿಯ ಮನೆಯಲ್ಲೇ ಇದ್ದರು ಎಂದು ಹೇಳಲಾಗಿದೆ.

ಸಂತ್ರಸ್ತ ಬಾಲಕಿಯ ಚಿಕ್ಕಪ್ಪ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದು ಮಠದ ಆಡಳಿತಾಧಿಕಾರಿಯಾಗಿದ್ದು, ಇತ್ತೀಚೆಗೆ ವಜಾಗೊಂಡ ಬಸವರಾಜನ್‌ ಅವರಿಗೆ ಮುಳುವಾಗುವ ಸಾಧ್ಯತೆ ಕಂಡುಬಂದಿದೆ. ಜುಲೈ ೨೪ರಂದು ಹಾಸ್ಟೆಲ್‌ ಬಿಟ್ಟು ತೆರಳಿದ್ದ ವಿದ್ಯಾರ್ಥಿನಿಯರು ಬೆಂಗಳೂರಿನ ಕಾಟನ್‌ ಪೇಟೆ ಠಾಣೆಯಲ್ಲಿ ಸಿಕ್ಕಿದ್ದಾಗ ಅವರನ್ನು ಮರಳಿ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದವರು ಎಸ್‌.ಕೆ. ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ. ಇಬ್ಬರು ವಿದ್ಯಾರ್ಥಿನಿಯರನ್ನು ಎರಡು ದಿನ ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದಾಗಿ ಒಪ್ಪಿದ್ದರು. ಬಳಿಕ ಅವರ ಮನೆಯಲ್ಲೇ ಬಿಟ್ಟು ಬಂದಿದ್ದಾಗಿ ಹೇಳಿದ್ದರು.

ಆದರೆ, ಆವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿ ಬಿಟ್ಟಿರಲಿಲ್ಲ. ತಮ್ಮ ಬಳಿ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಂಡು ಹೋಗಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಮಕ್ಕಳು ಅವರ ಮನೆಯಲ್ಲೇ ಇದ್ದಿರಬಹುದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ʻʻಜುಲೈ ೨೭ರಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅಜ್ಜಪ್ಪ ಎಂಬವರು ಎಸ್.ಕೆ ಬಸಣ್ಣ ಕರೆಯುತ್ತಿದ್ದಾರೆಂದು ಹೇಳಿ ಬಸವರಾಜನ್ ನಿವಾಸಕ್ಕೆ ಕರೆದೊಯ್ದಿದ್ದರು. ಅಲ್ಲಿ ಇಬ್ಬರು ಮಕ್ಕಳು ಇದ್ದರು. ಇವರನ್ನು ಬೆಂಗಳೂರಿನ ಪೊಲೀಸ್ ಠಾಣೆಯಿಂದ ಕರೆದುಕೊಂಡು ಬಂದಿರೋದಾಗಿ ಹೇಳಿದ್ದರು. ಯಾವ ವಿಷಯಕ್ಕೆ ಎಂದು ಕೇಳಿದಾಗ ಖಾಲಿ ಹಾಳೆ ಮೇಲೆ ಸಹಿ ಪಡೆದಿದ್ದರು. ಬಾಲಕಿಯರನ್ನ ಬೆಂಗಳೂರಿನಿಂದ ಕರೆದುಕೊಂಡು ಬಂದ ವಿಚಾರಕ್ಕೆಂದು ಸಹಿ ಪಡೆದರು. ಏನಿದೆಲ್ಲ ಎಂದು ಕೇಳಿದಾಗ ನಮ್ಮ ಮೇಲೆ ಭರವಸೆ ಇಲ್ಲವೇ ಎಂದು ಕೇಳಿದರು. ಕೊನೆಗೆ ಅವರ ಮೇಲೆ ಭರವಸೆ ಇಟ್ಟು ಸಹಿ ಮಾಡಿದ್ದೆʼʼ ಎಂದು ಬಾಲಕಿಯ ಚಿಕ್ಕಪ್ಪ ಹೇಳಿದ್ದಾರೆ.

ʻʻಮಗಳನ್ನು ಮನೆಗೆ ಬರುವಂತೆ ಕರೆದಾಗ ಆಕೆ ನಿರಾಕರಿಸಿದ್ದಳು. ಈ ವೇಳೆ ಬಸವರಾಜನ್ ಮತ್ತು ಸೌಭಾಗ್ಯ ಅವರಿಬ್ಬರೂ ಬಾಲಕಿಯರು ನಮ್ಮ ಮನೆಯಲ್ಲಿರಲಿ ಅವರ ವಿದ್ಯಾಭ್ಯಾಸ, ಉದ್ಯೋಗ, ವಿವಾಹ ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದರು. ಹಾಗಾಗಿ ಅಲ್ಲಿಂದ ವಾಪಸು ಬಂದೆʼʼ ಎಂದಿದ್ದಾರೆ ಬಾಲಕಿಯ ಚಿಕ್ಕಪ್ಪ.

ʻʻಇದಾದ ಮೂರು ದಿನಗಳ ಬಳಿಕ ಅಜ್ಜಪ್ಪ ಕರೆ ಮಾಡಿ ನಿಮ್ಮ ಮನೆಗೆ ಪೊಲೀಸರು ಬಂದಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಯಾರೂ ಬಂದಿಲ್ಲ ಎಂದು ಹೇಳಿದ್ದೆ. ಬಳಿಕ ನನ್ನನ್ನು ಕರೆದದ್ದು ಆಗಸ್ಟ್‌ ೨೯ರಂದು. ಆವತ್ತು ಅಜ್ಜಪ್ಪ ನಮ್ಮ ಮನೆ ಬಳಿ ಬಂದು ಬಸವರಾಜ್‌ ಕರೆಯುತ್ತಿದ್ದಾರೆ ಬಾ ಎಂದು ಹೇಳಿದ್ದ. ಬರುತ್ತೇನೆ ಎಂದು ಹೇಳಿದ್ದೆ. ಆದರೆ, ಕೆಲಸದ ಒತ್ತಡದಿಂದ ಹೋಗಿರಲಿಲ್ಲ. ಕೊನೆಗೆ ಮುರುಘಾ ಶರಣರ ವಿರುದ್ಧ ಬಾಲಕಿಯರು ಆರೋಪ ಮಾಡಿದ್ದು ಮಾಧ್ಯಮಗಳ ಮೂಲಕ ಗೊತ್ತಾಯಿತುʼʼ ಎಂದು ಚಿಕ್ಕಪ್ಪ ಹೇಳಿದ್ದಾರೆ.

ʻʻಈ ನಡುವೆ ಸಂತ್ರಸ್ತ ಬಾಲಕಿಯರನ್ನು ಒಂದು ತಿಂಗಳ ಹಿಂದೆಯೇ ಅವರ ಮನೆಗೆ ಕಳುಹಿಸಿದ್ದಾಗಿ ಬಸವರಾಜ್‌ ಹೇಳಿದ್ದು ಗೊತ್ತಾಯಿತು ಹೇಳಿಕೆ ನೀಡಿದ್ದು ಗೊತ್ತಾಯಿತು. ಆದರೆ, ಮಗಳನ್ನು ನಾನು ಮನೆಗೆ ಕರೆದುಕೊಂಡು ಬಂದಿರಲಿಲ್ಲʼʼ ಎಂದು ದೂರಿನಲ್ಲಿ ತಿಳಿಸಿರುವ ಬಾಲಕಿ ಚಿಕ್ಕಪ್ಪ, ಈಗ ಮಗಳನ್ನು ಮಾತನಾಡಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅವರ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಎಸ್‌.ಕೆ. ಬಸವರಾಜನ್‌ ದಂಪತಿ ಒಂದು ತಿಂಗಳ ಕಾಲ ಬಾಲಕಿಯರನ್ನು ತಮ್ಮ ಮನೆಯಲ್ಲೇ ಯಾಕೆ ಇಟ್ಟುಕೊಂಡರು. ಅವರ ಮನೆಗೆ ಕಳುಹಿಸಿದ್ದೇನೆ ಎಂದು ಹೇಳಿದ್ದೇಕೆ ಎಂಬ ಪ್ರಶ್ನೆಗಳು ಕುತೂಹಲ ಕೆರಳಿಸಿವೆ.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ| ಶ್ರೀಗಳಿಗೆ ಸೆ.5ರವರೆಗೆ ಜಾಮೀನಿಲ್ಲ, ಉಳಿದ 3 ಆರೋಪಿಗಳ ಬಂಧನಕ್ಕೆ ತಲಾಶ್‌

Exit mobile version