Site icon Vistara News

ಮುರುಘಾಶ್ರೀ ಪ್ರಕರಣ | 5 ಗಂಟೆ ಸತತ ವಿಚಾರಣೆ ಬಳಿಕ ವಾರ್ಡನ್‌ ರಶ್ಮಿ ಸಾಂತ್ವನ ಕೇಂದ್ರಕ್ಕೆ ಶಿಫ್ಟ್‌, ನಾಳೆ ಮತ್ತೆ ಗ್ರಿಲ್

DYSP office1

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಎರಡನೇ ಆರೋಪಿ, ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಅವರನ್ನು ಗುರುವಾರ ಸತತ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ನಾಳೆಯೂ ಮುಂದುವರಿಯಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಾರ್ಡನ್‌ ರಶ್ಮಿ ಅವರು ಮುರುಘಾಶರಣರ ಮೇಲಿನ ಪೋಕ್ಸೊ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದರೆ, ಮಠದ ಆಡಳಿತಾಧಿಕಾರಿ ಬಸವರಾಜ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ಮೇಲೆ ದಾಖಲಾದ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌ ದೂರಿನ ಅರ್ಜಿದಾರೆ ಮತ್ತು ಸಂತ್ರಸ್ತೆಯಾಗಿದ್ದಾರೆ.

ಪೋಕ್ಸೊ ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್‌ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್‌ ಗಂಗಾಧರ್‌ ಮತ್ತು ಶ್ರೀಗಳ ಆಪ್ತರಾದ ಪರಮಶಿವಯ್ಯ ಅವರ ವಿರುದ್ಧ ಕೇಸು ದಾಖಲಾಗಿದೆ.

ಸಂತ್ರಸ್ತ ಬಾಲಕಿಯರ ಪ್ರಕಾರ, ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಾರ್ಡನ್‌ ರಶ್ಮಿ ಅವರೂ ಶಾಮೀಲಾಗಿದ್ದಾರೆ. ಘಟನೆಯಲ್ಲಿ ಅವರ ಪಾತ್ರವೂ ಇದೆ. ಈ ಹೇಳಿಕೆಯ ಆಧಾರದಲ್ಲಿ ರಶ್ಮಿ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿರುವ ಸಾಧ್ಯತೆಗಳಿವೆ.

ರಶ್ಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ರೀತಿಯನ್ನು ಗಮನಿಸಿದರೆ ಅವರನ್ನು ನಾಳೆ ವಿಚಾರಣೆ ಮುಂದುವರಿಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ಹಂತದಲ್ಲಿ ಬಂಧನವೇ ನಡೆದು ಹೋಯಿತು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಎಸ್‌ಪಿ ಪರಶುರಾಮ್‌ ಅವರು ವಿಚಾರಣೆ ಮಾತ್ರ ಎಂದು ಸ್ಪಷ್ಟನೆ ನೀಡಬೇಕಾಯಿತು.

ಲುಕ್‌ಔಟ್‌ ನೋಟಿಸ್‌ ಇಲ್ಲ
ಈ ನಡುವೆ, ಮುರುಘಾಶ್ರೀಗಳ ಬಂಧನಕ್ಕೆ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಲಾಗಿದೆ ಎಂಬ ಸುದ್ದಿಯೂ ಹರಡಿತ್ತು. ಅದಕ್ಕೂ ಪೊಲೀಸರು ಸ್ಪಷ್ಟನೆ ನೀಡಿದರು. ಲುಕ್‌ ಔಟ್‌ ನೋಟಿಸ್‌ ಎಂದರೆ ಆರೋಪಿಗಳು ದೇಶ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ಇದ್ದರೆ ಅದನ್ನು ತಡೆಯುವುದಕ್ಕೆ ನೀಡುವ ಸೂಚನೆ. ಇದರಲ್ಲಿ ವ್ಯಕ್ತಿಯ ಪಾಸ್‌ಪೋರ್ಟ್‌ ಸೇರಿದಂತೆ ಇತರ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳಿರುತ್ತವೆ. ಇಲ್ಲಿ ಅಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದರು.

Exit mobile version