ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯಗೊಳ್ಳಲಿದೆ. ಆದರೆ ಬಿಡುಗಡೆ ಸಾಧ್ಯತೆ ಸದ್ಯಕ್ಕೆ ದೂರವಾಗಿದೆ.
ಮುರುಘಾ ಶ್ರೀಗಳನ್ನು ಜಿಲ್ಲಾ ಕಾರಾಗೃಹದಿಂದ ಪೊಲೀಸರು ಕರೆತಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ. ಕೋರ್ಟ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಿದೆ.
ಕೇಸ್‌ನ 2ನೇ ಆರೋಪಿ ಲೇಡಿ ವಾರ್ಡನ್ ನ್ಯಾಯಾಂಗ ಬಂಧನ ಅವಧಿಯೂ ಅಂತ್ಯವಾಗಿದ್ದು, ಅವರನ್ನೂ ಶಿವಮೊಗ್ಗದ ಕಾರಾಗೃಹದಿಂದ ಕರೆತರಲಿದ್ದಾರೆ. ಅವರ ನ್ಯಾಯಾಂಗ ಬಂಧನವೂ ವಿಸ್ತರಣೆಯಾಗಲಿದೆ. ಇಬ್ಬರಿಗೂ ಈವರೆಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನ ವಿಸ್ತರಣೆಯಾಗಲಿದೆ. ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ಇದನ್ನೂ ಓದಿ | ಮುರುಘಾ ಶ್ರೀ | ಒಡನಾಡಿ ಸೇವಾ ಸಂಸ್ಥೆಯಿಂದ ಮತ್ತೊಂದು ದೂರು
ಎರಡನೇ ಪೋಕ್ಸೋ ಪ್ರಕರಣ
ಮುರುಘಾ ಶ್ರೀ ವಿರುದ್ಧ ಅಕ್ಟೋಬರ್ 13ರಂದು ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ವಿಚಾರಣೆ, ಸ್ಥಳ ಮಹಜರು ಮತ್ತು ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಒಳಪಡಿಸಲಿದ್ದಾರೆ.
ಆಗಸ್ಟ್ 26ರಂದು ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಕೇಸ್ ದಾಖಲು ಬಳಿಕ ಚಿತ್ರದುರ್ಗ ಬಾಲಮಂದಿರದಲ್ಲಿದ್ದ ಸಂತ್ರಸ್ತ ಬಾಲಕಿಯರನ್ನು ಪೋಷಕರ ಜತೆ ಕಳಿಸುವ ಪ್ರಕ್ರಿಯೆ ನಿನ್ನೆ ನಡೆಯಿತು. ಆದರೆ ಪೋಷಕರ ಜತೆ ತೆರಳಿದ್ದ ಒಬ್ಬಳು ಬಾಲಕಿ ಅರ್ಧಗಂಟೆಯಲ್ಲೇ ಮನೆಯಿಂದ ವಾಪಸ್ ಬಂದಿದ್ದು, ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮನೆಗೆ ತೆರಳಿ ಭೇಟಿಯಾಗಿದ್ದಾಳೆ. ಬಾಲಕಿಯನ್ನು ಮಹಿಳಾ ಠಾಣೆಗೆ ಕರೆತರಲಾಗಿದ್ದು, ಬಾಲಕಿ ತನ್ನ ಮನೆಯಲ್ಲಿ ಇರಲಾಗದು ಎಂದಿರುವ ಹಿನ್ನೆಲೆಯಲ್ಲಿ ಮತ್ತೆ ಬಾಲಮಂದಿರಕ್ಕೆ ಕಳಿಸಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠದ ವಿದ್ಯಾರ್ಥಿನಿಲಯದಲ್ಲಿದ್ದ ಅಷ್ಟೂ ಹೆಣ್ಣು ಮಕ್ಕಳ ಆಪ್ತ ಸಮಾಲೋಚನೆಗೆ ಆದೇಶ