Site icon Vistara News

ಮುರುಘಾಶ್ರೀ ಪ್ರಕರಣ | ಶ್ರೀಗಳಿಗೆ ಎದೆನೋವು, ಜೈಲಿನಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್‌

murugha sree in hospital

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರು ಎದೆನೋವು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.

ಗುರುವಾರ ತಡರಾತ್ರಿಯ ಬಳಿಕ ಚಿತ್ರದುರ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆಯ ವೇಳೆಗೆ ಅವರು ಅನಾರೋಗ್ಯಕ್ಕೊಳಗಾಗಿದ್ದು, ಡಿಆರ್ ವಾಹನದಲ್ಲಿ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ.

ಗುರುವಾರ ರಾತ್ರಿ ಶ್ರೀಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಧಿಸಿದ್ದರು. ಇದಕ್ಕೂ ಮುನ್ನ ವೈದ್ಯಕೀಯ ತಪಾಸಣೆ ನಡೆದಿತ್ತು. ಎದೆ ನೋವು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರು ಹೇಳಿದ್ದರು. ಇದು ಜಿಲ್ಲಾಸ್ಪತ್ರೆ ವೈದ್ಯರು ನೀಡಿರುವ ಮೆಡಿಕಲ್ ರಿಪೋರ್ಟ್‌ನಲ್ಲಿ ನಮೂದಾಗಿದೆ. ಬೆಳಗ್ಗೆಯಿಂದ ಸುಸ್ತಿನ ಲಕ್ಷಣಗಳನ್ನು ತೋರಿಸಿದ್ದ ಸ್ವಾಮೀಜಿಯವರನ್ನು ಈಗ ಜಿಲ್ಲಾಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಶ್ರೀಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೂ ಶಿಫ್ಟ್‌ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದರೊಂದಿಗೆ, ತಡರಾತ್ರಿ 3 ಗಂಟೆಗೆ ಜೈಲು ಸೇರಿದ್ದ ಮುರುಘಾ ಶ್ರೀಗಳು 6 ಗಂಟೆಯಷ್ಟೇ ಜೈಲಿನಲ್ಲಿದ್ದಂತಾಗಿದೆ. ಜೈಲುವಾಸ ತಪ್ಪಿಸಿಕೊಳ್ಳಲು ಈ ಹೈಡ್ರಾಮಾ ನಡೆಯುತ್ತಿದೆಯೇ ಎಂಬ ಶಂಕೆಯೂ ಮೂಡಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಭಕ್ತಾದಿಗಳು ಜಮಾಯಿಸಿದ್ದಾರೆ. ಬಿಗಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶರಣರು ಈಗ ಕೈದಿ ನಂಬರ್‌ 2261

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳಿಗೆ ಜಾಮೀನು ನೀಡದಿರಲು ಪೊಲೀಸರ ಆಕ್ಷೇಪವೇನು?

ನಿದ್ರೆ ಇಲ್ಲದ ರಾತ್ರಿ

ಗುರುವಾರ ಇಡೀ ರಾತ್ರಿ ಜೈಲಿನಲ್ಲಿ ನಿದ್ರೆ ಇಲ್ಲದೆ ಶ್ರೀಗಳು ಸಮಯ ಕಳೆದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಹೋಗಿ ಬೆಳಗ್ಗೆ ಬಂದ ಜೈಲಿ ಅಧಿಕಾರಿಗಳಿಗೆ ಶ್ರೀಗಳು ಕೈದಿಗಳಾಗಿದ್ದುದು ಕಂಡು ಶಾಕ್ ಆಗಿದ್ದು, ಜೈಲಿನಲ್ಲಿ ಶ್ರೀಗಳನ್ನು ನೋಡಲಾಗದೆ ಬೇಸರಗೊಂಡಿದ್ದರು ಎಂದು ತಿಳಿದುಬಂದಿದೆ. ನಡುವೆ ಮುರುಘಾ ಶ್ರೀಗಳಿಗೆ ಅಗತ್ಯ ಮಾತ್ರೆಗಳನ್ನು, ನಿತ್ಯಕರ್ಮಗಳಿಗೆ ಬೇಕಾದ ಟವೆಲ್, ಟೂತ್ ಪೇಸ್ಟ್, ಬ್ರಷ್ ಇತ್ಯಾದಿ ವಸ್ತುಗಳನ್ನು ಮಠದ ಸಿಬ್ಬಂದಿ ತಂದುಕೊಟ್ಟಿದ್ದರು.

ಮಠದ ಪೂಜೆಗೆ ಉಸ್ತುವಾರಿ

ತಾವು ಬಂಧನಕ್ಕೊಳಗಾಗಲಿರುವ ಹಿನ್ನೆಲೆಯಲ್ಲಿ ಮುರುಘಾ ಮಠದ ಪೂಜೆ ಪುನಸ್ಕಾರ ನೋಡಿಕೊಳ್ಳಲು ಹೆಬ್ಬಾಳ ಶ್ರೀಗೆ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಮುರುಘಾ ಮಠದ ಶಾಖಾಮಠ ಹೆಬ್ಬಾಳು ಮಠದ ಮಹಾಂತರುದ್ರ ಶ್ರೀಗಳಿಗೆ ಜವಾಬ್ದಾರಿ ವಹಿಸಿಕೊಡುವಂತೆ ಬಂಧನಕ್ಕೂ ಮುನ್ನ ಶರಣರು ಸೂಚಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶರಣರು ಈಗ ಕೈದಿ ನಂಬರ್‌ 2261

Exit mobile version