ಚಿತ್ರದುರ್ಗ: ಎದೆನೋವಿನಿಂದ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮುರುಘಾ ಮಠದ ಶ್ರೀಗಳನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದ ಶ್ರೀಗಳನ್ನು ತಜ್ಞ ವೈದ್ಯರು ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ಜಿಲ್ಲಾಸ್ಪತ್ರೆಗೆ ಮಧ್ಯಾಹ್ನ 12.30ಕ್ಕೆ ಆಗಮಿಸಿದ ದಾವಣಗೆರೆ ಎಸ್.ಎಸ್.ನಾರಾಯಣ ಹೃದಯಾಲಯದ ಇಬ್ಬರು ತಜ್ಞ ವೈದ್ಯರು, ಶ್ರೀಗಳ ತಪಾಸಣೆ ನಡೆಸಿದರು. ವೈದ್ಯಕೀಯ ಸಲಕರಣೆಗಳ ಜೊತೆ ಆಗಮಿಸಿದ ಹೃದ್ರೋಗ ತಜ್ಞರಾದ ಡಾ.ಮಲ್ಲೇಶ್ ಹಾಗೂ ಡಾ.ಶ್ರೀನಿವಾಸ್ ವಿವರವಾದ ತಪಾಸಣೆ ನಡೆಸಿ, ಬೆಂಗಳೂರಿನ ಜಯದೇವ ಅಸ್ಪತ್ರೆಗೆ ಶಿಫ್ಟ್ ಮಾಡಲು ಸೂಚಿಸಿದರು.
ಈ ನಡುವೆ ಮುರುಘಾ ಶರಣರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡುವ ಕುರಿತೂ ಚಿಂತನೆ ನಡೆಸಲಾಯಿತು. ಶ್ರೀಗಳ ಆರೋಗ್ಯ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ, ಏರ್ ಲಿಫ್ಟ್ ಬಗ್ಗೆ ಚಿಂತಿಸಲಾಗಿತ್ತು. ಬಳಿಕ, ಆಂಬ್ಯಲೆನ್ಸ್ ಮೂಲಕ ಕರೆದೊಯ್ಯುವ ನಿರ್ಧಾರಕ್ಕೆ ಬಂದಿದ್ದಾರೆ.
ಮುರುಘಾ ಶರಣರನ್ನು ಬೆಂಗಳೂರಿಗೆ ಕರೆದೊಯ್ಯಲು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಜಿಲ್ಲಾಸ್ಪತ್ರೆ ಆವರಣಕ್ಕೆ ಆಗಮಿಸಿದೆ. ಮುರುಘಾ ಮಠಕ್ಕೇ ಸೇರಿರುವ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಇದಾಗಿದೆ. ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಆದರೆ ಚಿತ್ರದುರ್ಗ ಕೇಂದ್ರ ಕಾರಾಗೃಹದ ವಾಸವನ್ನು ಶ್ರೀಗಳು ತಪ್ಪಿಸಿಕೊಳ್ಳಲಿದ್ದಾರೆ.
ಗುರುವಾರ ತಡರಾತ್ರಿ ಶ್ರೀಗಳ ಬಂಧನವಾಗಿತ್ತು. ಅದಕ್ಕೂ ಮುನ್ನ ವೈದ್ಯಕೀಯ ತಪಾಸಣೆ ನಡೆದಿತ್ತು. ಎದೆನೋವು ಕಾಣಿಸಿಕೊಂಡರೆ ಆಸ್ಪತ್ರೆಗೆ ಸೇರಿಸಲು ವೈದ್ಯಾಧಿಕಾರಿಗಳು ಸೂಚಿಸಿದ್ದರು. ತಡರಾತ್ರಿ ನ್ಯಾಯಾಧೀಶರ ಮುಂದೆ ಶ್ರೀಗಳನ್ನು ಹಾಜರುಪಡಿಸಿದಾಗ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕೇಂದ್ರ ಕಾರಾಗೃಹಕ್ಕೆ ತೆರಳಿದ್ದ ಶ್ರೀಗಳಿಗೆ ಕೈದಿ ನಂ 2261 ನೀಡಲಾಗಿತ್ತು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ| ಶ್ರೀಗಳ ಅರೆಸ್ಟ್ ಬೆನ್ನಿಗೇ 2ನೇ ಆರೋಪಿ ವಾರ್ಡನ್ ರಶ್ಮಿ ಕೂಡಾ ಬಂಧನ