ಶಿವಮೊಗ್ಗ: ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡುವವರಲ್ಲ. ನನಗೆ ಈ ಬಗ್ಗೆ ನೂರಕ್ಕೆ ನೂರು ಗೊತ್ತಿದೆ. ಹಿಂದುಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ. ಮುಸ್ಲಿಮರಲ್ಲೂ ತಲೆಹರಟೆಗಳಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದು, ವಿಡಿಯೊ ವೈರಲ್ (video viral) ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ.
ಮೂರು ದಿನಗಳ ಹಿಂದೆ ಈಶ್ವರಪ್ಪ ಅವರು ಅಲ್ಪಸಂಖ್ಯಾತ ಮುಖಂಡರ ಜತೆ ಮಾತನಾಡಿರುವ ವಿಡಿಯೊ ಇದು ಎಂದು ಹೇಳಲಾಗಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಳೆ ಮಾತನಾಡಿದ ಅವರು, ಹಿಂದುಗಳಲ್ಲೂ ನಾಲ್ಕು ಜನ ಸೇರಿಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೊವನ್ನು ಮೊದಲು ಅಪ್ಲೋಡ್ ಮಾಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ.
ತಲೆಹರಟೆಗಳು ಗಲಾಟೆ ಮಾಡದಿದ್ದರೆ ಶಿವಮೊಗ್ಗ ತಣ್ಣಗೆ ಇರುತ್ತದೆ. ನಾನು ತಪ್ಪು ಮಾಡಿದರೆ ಇಲ್ಲಿಯೇ ಸಭೆಯಲ್ಲಿ ಹೇಳಿ. ನಾವು ಸಮಾಜದಲ್ಲಿ ಅಣ್ಣ-ತಮ್ಮಂದಿರಂತೆ ಇರುತ್ತೇವೆ. ಶಿವಪ್ಪ ನಾಯಕ ಸರ್ಕಲ್ನಲ್ಲಿ ಎಸ್ಡಿಪಿಐನವರು ಒಂದು ಸಮ್ಮೇಳನವನ್ನು ಮಾಡಿದರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ ಹಿಂದುಸ್ತಾನ್ ಮುರ್ದಾಬಾದ್, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ. ಸುಮ್ಮನಿರುತ್ತಾರಾ? ಯಾರಾದರೂ ಇದನ್ನು ಕೇಳಿಕೊಂಡು, ನೀವು ಸುಮ್ಮನಿರುತ್ತೀರಾ? ನಾನು ಬಾಯಿ ಬಿಟ್ಟು ಹೇಳುತ್ತೇನೆ. ನೀವು ಸುಮ್ಮನಿರಬಹುದು. ಆದರೆ ನಾನು ಸುಮ್ಮನಿರಲಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: Road Accident: ಮನೆಯಿಂದ ರಸ್ತೆಗಿಳಿದು ಹೊರಟಿದ್ದ ಬಾಲಕಿಗೆ ಗುದ್ದಿದ ಬೈಕ್; ಆಕೆ ಎಗರಿಬಿದ್ದರೂ ಸವಾರ ಎಸ್ಕೇಪ್
ಅಂದು ಗಾಜನೂರು ಹತ್ತಿರ ತಲವಾರ್ ಬೀಸಿದ್ದು ಯಾರು? ಹೀಗೆ ಮಾಡಿದ್ದು ಶಿವಮೊಗ್ಗದವರಲ್ಲ. ಇದರಿಂದ ಯಾರೋ ಒಬ್ಬ ಸತ್ತ. ಇದಕ್ಕೆ ಶಿವಮೊಗ್ಗ ಮುಸಲ್ಮಾನರು ಕಾರಣನಾ? ಉದಾಹರಣೆಗೆ ಹರ್ಷ ಮೃತಪಟ್ಟ. ರಾತ್ರಿ ಬಂದು ಯಾರೋ ಹೊಡೆದು ಹೋದರು. ಸುಮ್ಮಸಮ್ಮನೆ ನಮ್ಮ ನಿಮ್ಮ ಮಕ್ಕಳನ್ನು ಹೊಡೆದರೆ ಸುಮ್ಮನಿರೋದಕ್ಕಾಗುತ್ತಾ? ಖಂಡಿಸಬೇಕಾ ಬೇಡವಾ? ನಾನಂತೂ ಖಂಡಿಸುತ್ತೇನೆ. ಬಿಜೆಪಿಯಲ್ಲಿ ಬಹಳ ಜನ ಪ್ರಶ್ನೆ ಮಾಡಲ್ಲ. ಆ ಪ್ರಶ್ನೆ ಬೇರೆ. ಆದರೆ ನನಗೆ ತಡೆದುಕೊಳ್ಳಲು ಆಗುವುದಿಲ್ಲ. ಕೆಟ್ಟದ್ದನ್ನು ಎಂದೂ ಕೂಡ ನಾನು ಬಿಡುವುದಿಲ್ಲ. ಎಲ್ಲ ಮುಸಲ್ಮಾನರ ಬಗ್ಗೆ ನಾವು ಹೇಳುವುದಿಲ್ಲ, ಗೂಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.