Site icon Vistara News

MD Sharief : ಶಿವಮೊಗ್ಗದ ಸಾವರ್ಕರ್‌, ಟಿಪ್ಪು ಸುಲ್ತಾನ್ ಫೋಟೊ ವಿವಾದದ ರೂವಾರಿ ಎಂ.ಡಿ. ಷರೀಫ್‌ ಬಂಧನ

MD Sharief

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಕಚೇರಿಯಲ್ಲಿ ಟಿಪ್ಪು ಸುಲ್ತಾನ್‌ ಭಾವಚಿತ್ರ ಹಾಕಿಸುವ ಮೂಲಕ ಮತ್ತೊಮ್ಮೆ ಫೋಟೊ ವಿವಾದ ಸೃಷ್ಟಿಸಿದ ಮುಸ್ಲಿಂ ಮುಖಂಡ ಎಂ.ಡಿ. ಷರೀಫ್‌ (MD Sharief) ಅವರನ್ನು ಬಂಧಿಸಲಾಗಿದೆ.

ಆದರೆ, ಅವರನ್ನು ಬಂಧಿಸಿರುವುದು ಈ ಫೋಟೊ ವಿವಾದಕ್ಕೆ ಸಂಬಂಧಿಸಿ ಅಲ್ಲ. ಬದಲಾಗಿ ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಂಪೌಂಡ್‌ ಒಡೆದ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. ಟಿಪ್ಪು ನಗರದ ಸಹೆರಾ ಇಮ್ರಾನ್‌ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಷರೀಫ್‌ ಅವರನ್ನು ಬಂಧಿಸಲಾಗಿದೆ. ಷರೀಫ್‌ ತಮ್ಮ ನಿವೇಶನದ ಕಾಂಪೌಂಡ್‌ ಒಡೆದಿದ್ದಾರೆ ಮತ್ತು ಅದನ್ನು ಪ್ರಶ್ನಿಸಿದ್ದಕ್ಕೆ ಇನ್ನಿಬ್ಬರ ಜತೆ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಸಹೆರಾ ತುಂಗಾ ನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಷರೀಫ್‌ ಜತೆಗೆ ಸ್ನೇಹಿತ ಮಕ್ಸೂದ್‌ಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿ
ಕನ್ನಡಿಗರ ಪರ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಎಂ.ಡಿ. ಷರೀಫ್‌ ಶಿವಮೊಗ್ಗದ ಮುಸ್ಲಿಂ ಹಾಸ್ಟೆಲ್‌ನ ಮಾಜಿ ಅಧ್ಯಕ್ಷರು ಕೂಡಾ ಹೌದು. ಶಿವಮೊಗ್ಗದಲ್ಲಿ ಪ್ರಭಾವಿ ಮುಸ್ಲಿಂ ಮುಖಂಡರೆಂದು ಗುರುತಿಸಿಕೊಂಡಿರುವ ಷರೀಫ್‌ ಅವರ ಪತ್ನಿ ಮೆಹಕ್‌ ಷರೀಫ್‌ ಅವರು ಶಿವಮೊಗ್ಗ ಮಹಾನಗರಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ.

ಮೆಹಕ್‌ ಅವರು ಮಂಗಳವಾರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪದಗ್ರ್ರಹಣ ಮಾಡಿದಾಗ ಅವರಿಗೆ ಟಿಪ್ಪು ಸುಲ್ತಾನ್‌ ಭಾವಚಿತ್ರವನ್ನು ಗಿಫ್ಟ್‌ ಆಗಿ ನೀಡಿದ್ದ ಷರೀಫ್‌ ಅದನ್ನು ಅಲ್ಲೇ ಗೋಡೆಯಲ್ಲಿ ಅಳವಡಿಸುವಂತೆ ಹೇಳಿದ್ದರೆನ್ನಲಾಗಿದೆ. ಹೀಗೆ ಟಿಪ್ಪು ಸುಲ್ತಾನ್‌ ಫೋಟೊ ಅಳವಡಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿ ಸಂಜೆಯ ಹೊತ್ತಿಗೆ ತೆರವು ಮಾಡಬೇಕಾಯಿತು.

ಈ ನಡುವೆ ಬುಧವಾರ ಬಜರಂಗ ದಳ ಮತ್ತು ಇತರ ಹಿಂದು ಸಂಘಟನೆಗಳು ಎರಡು ತಂಡಗಳಾಗಿ ಟಿಪ್ಪು ಸುಲ್ತಾನ್‌ ಫೋಟೊ ಅಳವಡಿಕೆ ವಿರುದ್ಧ ಪ್ರತಿಭಟನೆ ನಡೆಸಿದವು. ಈ ಫೋಟೊ ಅಳವಡಿಕೆಯ ಹಿಂದೆ ಷರೀಫ್‌ ಕೈವಾಡವಿದೆ ಎನ್ನುವುದು ಅವರ ಪ್ರಮುಖ ಆಕ್ರೋಶವಾಗಿತ್ತು. ಇಂಥ ಕೃತ್ಯಗಳ ಮೂಲಕ ಷರೀಫ್‌ ಶಿವಮೊಗ್ಗದಲ್ಲಿ ಕೋಮು ದ್ವೇಷಕ್ಕೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಇಂಥ ಶಕ್ತಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

ಷರೀಫ್‌ ಅವರ ಹೆಸರು ಪ್ರಮುಖವಾಗಿ ಕೇಳಿಬಂದದ್ದು ೨೦೨೨ರ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ಶಿವಮೊಗ್ಗ ಶಿವಪ್ಪ ನಾಯಕ ಮಾಲ್‌ನಲ್ಲಿ‌ ಹಾಕಲಾಗಿದ್ದ ಸ್ವಾತಂತ್ರ್ಯ ಯೋಧರ ಸಾಲಿನಲ್ಲಿ ವಿ.ಡಿ. ಸಾವರ್ಕರ್‌ ಅವರ ಫೋಟೊ ಹಾಕಿದ್ದನ್ನು ಆಕ್ಷೇಪಿಸಿ ದೊಡ್ಡ ಹಂಗಾಮ ಸೃಷ್ಟಿಸಿದ್ದರು. ಆ.15ರ ಮಧ್ಯಾಹ್ನ ಮಾಲ್‌ನ ಎದುರಿನಲ್ಲಿರುವ ಅಮೀರ್‌ ಅಹ್ಮದ್ ಸರ್ಕಲ್‌ನಲ್ಲಿ ವಿ.ಡಿ. ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದು, ಸಂಘರ್ಷದ ಸ್ಥಿತಿ ನಿರ್ಮಾಣವಾಗಿತ್ತು. ಇದರ ಹಿನ್ನೆಲೆಯಲ್ಲಿ ಚೂರಿ ಇರಿತದ ಪ್ರಕರಣವೂ ನಡೆದಿತ್ತು.

ಮಾಲ್‌ನ ಪ್ರಕರಣದಲ್ಲಿ ಷರೀಫ್‌ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಈಗ ನಿವೇಶನದ ಆವರಣ ಗೋಡೆ ಕೆಡವಿದ ಪ್ರಕರಣದಲ್ಲಿ ಬಂಧನವಾಗಿದೆ.

ಇದನ್ನೂ ಓದಿ | ಟಿಪ್ಪು ವಿವಾದ : ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಾಕಿದ್ದ ಟಿಪ್ಪು ಸುಲ್ತಾನ್ ಫೋಟೊ ತೆರವು

Exit mobile version