ಬೆಂಗಳೂರು: ರಾಜ್ಯ ಸರ್ಕಾರವು ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ತಲಾ ಶೇ.2 ಮೀಸಲಾತಿ ಹೆಚ್ಚಿಸಲು ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿಯನ್ನು ರದ್ದುಪಡಿಸಿದ ನಿರ್ಧಾರದ ವಿರುದ್ಧ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟಾದ ಮುಸ್ಲಿಂ ಮುಖಂಡರು ಈ ಕುರಿತು ಚರ್ಚೆ ನಡೆಸಿದರು. ಮುಸ್ಲಿಂ ಸಮುದಾಯ ಈಗಾಗಲೇ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗ. ಇಡಬ್ಲುಎಸ್ ನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದುವರಿದವರೇ ಹೆಚ್ಚಿದ್ದಾರೆ. ಇಂತಹ ಸಮುದಾಯದೊಂದಿಗೆ ಮುಸ್ಲಿಮರು ಸ್ಪರ್ಧೆ ಮಾಡೋದು ಕಠಿಣ. ಹಲವು ಆಯೋಗದ ವರದಿಯಲ್ಲೂ ಮುಸ್ಲಿಂ ಮೀಸಲಾತಿ ಮುಂದುವರಿಸಲು ಸಲಹೆ ನೀಡಲಾಗಿದೆ.
1975ರಲ್ಲಿ ಹಾವನೂರ ಆಯೋಗ, 1983ರಲ್ಲಿ ಟಿ. ವೆಂಕಟಸ್ವಾಮಿ ಆಯೋಗದಿಂದಲೂ ಮೀಸಲಾತಿ ಮುಂದುವರಿಸಲು ಸಲಹೆ ನೀಡಲಾಗಿದೆ. ಚಿನ್ನಪ್ಪ ರೆಡ್ಡಿ ಮತ್ತು ರವಿವರ್ಮ ಕುಮಾರ ಆಯೋಗಗಳಿಂದಲೂ ಮೀಸಲಾತಿ ಮುಂದುವರಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ನಾಯಕರು ಹೇಳಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ ಕೆ. ರೆಹಮಾನ್ ಖಾನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಜಮೀರ್ ಅಹ್ಮದ್, ಎನ್.ಎ. ಹ್ಯಾರಿಸ್, ಸಲೀಮ್ ಅಹ್ಮದ್, ರಿಜ್ವಾನ್ ಅರ್ಷದ್ ಸೇರಿ ಅನೇಕರು ಭಾಗವಹಿಸಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಲು ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಅಲ್ಲಿಯವರೆಗೂ ಸಮುದಾಯ ಯಾವುದೇ ಪ್ರತಿಭಟನೆ ನಡೆಸುವುದು ಬೇಡ, ಧಾರ್ಮಿಕ ಮುಖಂಡರೊಂದಿಗೂ ಮಾತುಕತೆ ನಡೆಸಲಾಗುತ್ತದೆ ಎಂದು ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ: Amit Shah: ಮುಸ್ಲಿಂ ಮೀಸಲಾತಿ ಸಂವಿಧಾನಬದ್ಧವಲ್ಲ: ಮೀಸಲಾತಿ ಕತ್ತರಿಗೆ ಅಮಿತ್ ಶಾ ಸಮರ್ಥನೆ