ಶಿವಮೊಗ್ಗ: ʻʻಅಲ್ಲಾನಿಗೇನು ಕಿವಿ ಕೇಳಿಸೋಲ್ವಾʼʼ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರ ಹೇಳಿಕೆ ವಿರುದ್ಧ ಶಿವಮೊಗ್ಗದ ಮುಸ್ಲಿಂ ಸಂಘಟನೆಯೊಂದು ರಾಷ್ಟ್ರಪತಿಗಳಿಗೆ ದೂರು ನೀಡಿದೆ.
ಮಂಗಳೂರಿನ ಶಾಂತಿನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ನಡೆಯುತ್ತಿದ್ದಾಗ ಆಜಾನ್ ಸದ್ದು ಕೇಳಿತ್ತು. ಆಗ ಸಿಟ್ಟಿಗೆದ್ದ ಈಶ್ವರಪ್ಪ ಅವರು, ʻʻಎಲ್ಲಿ ಹೋದರೂ ಇದೊಂದು ಸಮಸ್ಯೆ ಇದ್ದಿದ್ದೆ. ಸುಪ್ರೀಂಕೋರ್ಟ್ ಆದೇಶವಿದ್ದರೂ ಇದಕ್ಕೊಂದು ತಡೆ ಬಿದ್ದಿಲ್ಲʼʼ ಎಂದು ಹೇಳಿದ್ದರು. ಇದರ ಜತೆಗೆ, ʻʻಇವರೆಲ್ಲ ಮೈಕ್ ಹಾಕಿ ಯಾಕೆ ಬೊಬ್ಬೆ ಹೊಡೆಯಬೇಕು. ಅಲ್ಲಾನಿಗೇನು ಕಿವಿ ಕೇಳಲ್ವಾ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆʼ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮರುದಿನವೂ ಈಶ್ವರಪ್ಪ ಅವರು ಇದನ್ನು ಸಮರ್ಥಿಸಿಕೊಂಡಿದ್ದರು.
ಇದೀಗ ಈಶ್ವರಪ್ಪ ಅವರ ವಿರುದ್ಧ ಶಿವಮೊಗ್ಗದ ಪೀಸ್ ಆರ್ಗನೈಸೇಷನ್ ಸದಸ್ಯರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ದೂರು ಸಲ್ಲಿಸಲಾಗಿದ್ದು, ʻʻಈಶ್ವರಪ್ಪ ಅವರು ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕುʼʼ ಎಂದು ಮುಸ್ಲಿಂ ಮುಖಂಡರು ಮನವಿಯಲ್ಲಿ ಕೋರಿದ್ದಾರೆ.
ಈಶ್ವರಪ್ಪ ಹೇಳಿದ್ದೇನು?
ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಷಣದ ಮಧ್ಯೆ ಆಜಾನ್ ಆರಂಭವಾಗಿದ್ದಕ್ಕೆ ಸಿಡಿಮಿಡಿಯಾದ ಕೆ.ಎಸ್. ಈಶ್ವರಪ್ಪ, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು ಎಂದು ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ ಬೇಡ.
ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಮೈಕ್‌ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳುವುದಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಆದರೆ ಮೈಕ್ ಹಿಡಿದುಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಹೇಳಿದ್ದರು.
ಇದನ್ನೂ ಓದಿ : KS Eshwarappa: ನನಗಷ್ಟೇ ಅಲ್ಲ, ಮಗನಿಗೆ ಟಿಕೆಟ್ ಕೊಡದಿದ್ದರೂ ಪರ್ವಾಗಿಲ್ಲ ಎಂದರೇ ಕೆ.ಎಸ್. ಈಶ್ವರಪ್ಪ?