ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದ್ದೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ. ಮೈದಾನದ ಕುರಿತು ಪೊಲೀಸರು ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯ ನಂತರ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೈರುದ್ದೀನ್ ಮಾತನಾಡಿ, ಎಲ್ಲರೂ ಶಾಂತಿ ಕಾಪಾಡುವಂತೆ ನಾವು ಹೇಳಿದ್ದೇವೆ. ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಪೊಲೀಸರಿಗೆ ನಾವು ಸಹಕಾರ ನೀಡುತ್ತೇವೆ. ನಾವೆಲ್ಲರೂ 40 ವರ್ಷದಿಂದ ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಂದಾಯ ಇಲಾಖೆ ಏನು ಹೇಳುತ್ತದೆ ಎನ್ನುವುದರ ಆಧಾರದಲ್ಲಿ ಸ್ವಾತಂತ್ರೋತ್ಸವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ | ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆರ್ಡರ್
ಸಂಘಟನೆಯ ಅಬ್ದುಲ್ ರಜಾಕ್ ಮಾತನಾಡಿ, ಶಾಂತಿ ಸಭೆ ಆಗಿದ್ದು, ಶಾಂತಿ ಕಾಪಾಡುವಂತೆ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಬೇಡಿ ಎಂದು ಹೇಳಿದ್ದಾರೆ. ನಾವು ಧ್ವಜರೋಹಣ ಮಾಡುತ್ತೇವೆ, ಸುಪ್ರೀಂಕೋರ್ಟ್ ಅಂತಿಮ ತೀರ್ಪಿನಂತೆಯೇ ಮಾಡುತ್ತೇವೆ. ಈ ತೀರ್ಪಿನ ನಡುವೆ ಪಾಲಿಕೆ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಬಿಬಿಎಂಪಿಯ ಆದೇಶವನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇಲ್ಲಿ ನಾವು ಧ್ವಜರೋಹಣ ಮಾಡುತ್ತೇವೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕಂದಾಯ ಸಚಿವರು ಹೇಳಿದಂತೆ ಮಾಡಲು ಆಗುವುದಿಲ್ಲ. ಮೈದಾನದ ಕುರಿತು ಕಂದಾಯ ಇಲಾಖೆಯಲ್ಲಿ ಒಂದು ತುಂಡು ಪೇಪರ್ ಸಾಕ್ಷಿಯೂ ಇಲ್ಲ. ಇದ್ದರೆ ತಂದು ಸಾರ್ವಜನಿಕರಿಗೆ ತೋರಿಸಲಿ. ಇದರಲ್ಲಿ ನಮ್ಮ ಕಡೆಯಿಂದ ಯಾವುದೇ ಒತ್ತಡ ಇಲ್ಲ. ಹಿಂದು-ಮುಸ್ಲಿಂ ಭಾಯಿ ಭಾಯಿ, ನಾವೆಲ್ಲರೂ ಒಂದೇ ಎಂದರು.
ಡಿಸಿಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮುಸ್ಲಿಂ ಸಂಘಟನೆಗಳ ಜತೆ ಸಭೆ ಮಾಡಿದ್ದೇವೆ. ಅವರು ಕೆಲವೊಂದು ವಿಚಾರವನ್ನು ಹೇಳಿದ್ದಾರೆ. ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ತೊಡಕಾಗುವಂತಹ ವಿಚಾರಗಳ ಬಗ್ಗೆ ಎಚ್ಚರ ವಹಿಸುವಂತೆ ಅವರಿಗೆ ಸೂಚಿಸಲಾಗಿದೆ. ಕಾನೂನು ಪಾಲಿಸುವುದಾಗಿ ಎಲ್ಲ ಮುಖಂಡರೂ ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
ಧ್ಜಜಾರೋಹಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಶ್ರೀರಾಮ ಸೇನೆ ಮನವಿ
ಚಾಮರಾಜಪೇಟೆ ಆಟದ ಮೈದಾನದಲ್ಲಿ ಆಗಸ್ಟ್ 15ರಂದು ಧ್ವಜಾರೋಹಣಕ್ಕೆ ಅವಕಾಶ ನೀಡಬೇಕು ಎಂದು ಶ್ರೀರಾಮ ಸೇನೆ ವತಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಚಾಮರಾಜರಾಜಪೇಟೆ ಮೈದಾನ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಹಿಂದುಪರ ಸಂಘಟನೆಗಳು ಒತ್ತಾಯಿಸಿದ್ದು, ಈ ಹಿಂದೆಯೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಹಿಂದು ಹಬ್ಬಗಳ ಆಚರಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ | ಪರ್ಮಿಷನ್ ಕೊಡೋಕೆ ಜಮೀರ್ ಯಾರು? ಮೈದಾನ ಏನು ಅವರಪ್ಪಂದಾ ಎಂದು ಕೇಳಿದ ಸಿ.ಟಿ ರವಿ