ನವ ದೆಹಲಿ: ಕರ್ನಾಟಕ ರಾಜ್ಯ ಸರ್ಕಾರವು ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ರದ್ದು (Muslim Quota Issue) ಮಾಡಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಮೇ 25ಕ್ಕೆ ಮುಂದೂಡಿದೆ. ಇದೇ ವೇಳೆ, ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕಾಗಿ ಬಿಜೆಪಿ ನಾಯಕರ ನಡೆಯನ್ನು ಆಕ್ಷೇಪಿಸಿದೆ.
ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಶೇ.4 ಮೀಸಲಾತಿ ಜಾರಿಯಲ್ಲಿತ್ತು. ಕಳೆದ ಮಾರ್ಚ್ 27 ರಂದು ಕರ್ನಾಟಕ ಸರ್ಕಾರವು ಮೀಸಲು ರದ್ದುಪಡಿಸಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2 ಮೀಸಲು ಹೆಚ್ಚಿಸಿತ್ತು. ಇದನ್ನು ಪ್ರಶ್ನಿಸಿ ಮತ್ತು ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೊದಲ ವಿಚಾರಣೆ ಏಪ್ರಿಲ್ 25ರಂದು ನಡೆದಿತ್ತು. ಅಂದು ವಿಚಾರಣೆಯ ವೇಳೆ ಪರಿಷ್ಕೃತ ಮೀಸಲಾತಿ ನೀತಿಯಂತೆ ಯಾವುದೇ ನೇಮಕಾತಿ ಮತ್ತಿತರ ಪ್ರಕ್ರಿಯೆಗಳನ್ನು ಮುಂದಿನ ಆದೇಶದವರೆಗೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿತ್ತು. ರಾಜ್ಯ ಸರ್ಕಾರವೂ ಮೇ 9ರವರೆಗೆ ಪರಿಷ್ಕೃತ ನೀತಿಯಡಿಯಲ್ಲಿ ಯಾವುದೇ ನೇಮಕಾತಿ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿತ್ತು.
ಮಂಗಳವಾರ (ಮೇ 9) ಏನೇನಾಯಿತು?
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದಲ್ಲಿ ಮಂಗಳವಾರ (ಮೇ 9) ವಿಚಾರಣೆ ನಡೆದು ಅಂತಿಮವಾಗಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಲಾಯಿತು.
ಚುನಾವಣೆ ವೇಳೆ ಮೀಸಲು ಪ್ರಸ್ತಾಪಕ್ಕೆ ಕೆಂಡ
ವಿಚಾರಣೆಯ ವೇಳೆ ಮೀಸಲು ವಿಷಯವನ್ನು ಚುನಾವಣೆ ಪ್ರಚಾರದಲ್ಲಿ ಪ್ರಸ್ತಾಪ ಮಾಡಿದ್ದನ್ನು ಆಕ್ಷೇಪಿಸಿದರು. ಅದರಲ್ಲೂ ಮುಖ್ಯವಾಗಿ ಅಮಿತ್ ಶಾ ಹೇಳಿಕೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಚುನಾವಣೆ ವೇಳೆ ಪ್ರಸ್ತಾಪ ಮಾಡಿದ್ದು ಸರಿಯಲ್ಲ. ಇಂಥ ವಿಷಯಗಳನ್ನು ರಾಜಕೀಯಗೊಳಿಸುವುದು ಏಕೆ ಎಂದು ಕೋರ್ಟ್ ಪ್ರಶ್ನಿಸಿತು.
ಈ ನಡುವೆ, ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿ, ಈ ವಿಚಾರವು ಸಂವಿಧಾನಾತ್ಮಕ ಪೀಠದಲ್ಲಿ ಬಾಕಿ ಇದೆ. ಹೀಗಾಗಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಜತೆಗೆ ಮುಂದಿನ ವಿಚಾರಣೆಯವರೆಗೆ ಪರಿಷ್ಕೃತ ಮೀಸಲಾತಿ ನೀತಿಯಡಿ ಯಾವುದೇ ನೇಮಕಾತಿ ಮತ್ತಿತರ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು.
ಇದನ್ನೂ ಓದಿ : Muslim quota issue : ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಳ್ಳಲು ಬಿಜೆಪಿ ಸರ್ಕಾರ ವಿಫಲ: ಕಾಂಗ್ರೆಸ್