Site icon Vistara News

Muslim Reservation: ಕ್ರೈಸ್ತ, ಜೈನರಿಗೆ ಮೀಸಲಾತಿ ಮುಂದುವರಿಕೆ; ಮುಸ್ಲಿಮರು ಮಾತ್ರ ಹೊರಕ್ಕೆ: ವರ್ಗೀಕರಣದ ಕುರಿತು ಚರ್ಚೆ

muslim reservation exclusion discussion in politics

ಬೆಂಗಳೂರು: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಒಳಮೀಸಲಾತಿ ಹಂಚಿಕೆ ನಂತರ ಒಕ್ಕಲಿಗೆ ಹಾಗೂ ವೀರಶೈವ ಲಿಂಗಾಯತರ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಕುರಿತು ಕೆಲವು ಜಿಜ್ಞಾಸೆಗಳು ಮೂಡಿವೆ. ಸಂವಿಧಾನಬಾಹಿರ ಎಂದು ಮುಸ್ಲಿಮರನ್ನು ಮೀಸಲಿನಿಂದ ಹೊರಗಿಟ್ಟ ಸರ್ಕಾರ, ಜೈನ್‌ ಹಾಗೂ ಕ್ರಿಶ್ಚಿಯನ್ನರನ್ನು ಹಾಗೆಯೇ ಉಳಿಸಿಕೊಂಡಿದೆ.

ಹಿಂದುಳಿದ ವರ್ಗಗಳನ್ನು ಪ್ರವರ್ಗ 1, ಪ್ರವರ್ಗ 2ಎ, 2ಬಿ, ಪ್ರವರ್ಗ 3ಎ, 3ಬಿ ಎಂದು ವರ್ಗೀಕರಿಸಲಾಗಿತ್ತು. ಇದೀಗ ಹೊಸದಾಗಿ ರಾಜ್ಯ ಸರ್ಕಾರ ವರ್ಗೀಕರಣ ಮಾಡಿದಂತೆ 2ಸಿ ಮತ್ತು 2ಡಿ ಎಂಬ ಎರಡು ವರ್ಗಗಳನ್ನು ಸೃಷ್ಟಿ ಮಾಡಿದೆ.

3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಹಾಗೂ ಇತರೆ ಸಮುದಾಯಗಳನ್ನು 2ಸಿ ವರ್ಗಕ್ಕೆ ಸೇರಿಸಿದ್ದರೆ, 3ಬಿಯಲ್ಲಿದ್ದ ವೀರಶೈವ ಲಿಂಗಾಯತ ಮತ್ತಿತರ ಸಮುದಾಯಗಳನ್ನು 2ಡಿ ವರ್ಗಕ್ಕೆ ಸೇರಿಸಲಾಗಿದೆ. ಇದೀಗ ಸರ್ಕಾರ ಆದೇಶ ಹೊರಡಿಸಿದ್ದು, ಯಾವ್ಯಾವ ಸಮುದಾಯಗಳಿವೆ ಎಂಬ ಪಟ್ಟಿ ಇದರಲ್ಲಿದೆ.

ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ವರ್ಗೀಕರಣ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ. 4 ಮೀಸಲಾತಿಯನ್ನು 2ಸಿ ಹಾಗೂ 2ಡಿ ವರ್ಗಕ್ಕೆ ತಲಾ ಶೇ.2ರಂತೆ ಹಂಚಿಕೆ ಮಾಡಲಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಶೇ.10 ಮೀಸಲಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಇದೀಗ ಒಕ್ಕಲಿಗ ಸಮುದಾಯವನ್ನು ಒಳಗೊಂಡಿರುವ 2ಸಿ ವರ್ಗದಲ್ಲಿ ಒಕ್ಕಲಿಗ ಸಮುದಾಯದ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್‌, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಒಳಪಂಗಡಗಳಿವೆ. ಇದರ ಜತೆಗೆ ಕೊಡಗರು, ಬಲಿಜ, ಬಲಜಿಗ / ಬಣಜಿಗ / ಗೌಡಬಣಜಿಗ, ನಾಯ್ಡು, ತೆಲಗ ಬಲಿಜ /ತೆಲಗ ಬಣಜಿಗ, ಶೆಟ್ಟಿಬಲಿಜ / ಶೆಟ್ಟಿಬಣಜಿಗ / ಬಣಜಿಗ ಶೆಟ್ಟಿ, ದಾಸರ ಬಲಿಜ / ದಾಸರ ಬಲಜಿಗ/ ದಾಸರ ಬಣಜಿಗ / ದಾಸ ಬಣಜಿಗ, ಕಸ್ಟನ್ನು ನ್ಯೂರ / ಮುನ್ನಾರ್ / ಮುನ್ನೂರ್ ಕಾಪು, ಬಳೆಗಾರ / ಬಳೆ ಬಣಜಿಗ/ಬಳೆ ಬಲಜಿಗ / ಬಳೆ ಚೆಟ್ಟಿ / ಬಣಗಾರ, ರೆಡ್ಡಿ (ಬಲಿಜ), ಜನಪ್ಪನ್, ಉಪ್ಪಾರ (ಬಲಿಜ), ತುಲೇರು (ಬಲಿಜ) ಪಂಗಡಗಳಿವೆ.

2ಡಿ ಪ್ರವರ್ಗದಲ್ಲಿ ವೀರಶೈವ ಲಿಂಗಾಯತ, ಲಿಂಗಾಯತ ಉಪ ಜಾತಿಗಳಾದ- ಹೆಳವ, ಅಂಬಿಗ, ಭೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ ನಾವಿ, ಅಕ್ಕಸಾಲಿ, ಬಡಿಗಾರ್, ಕಮ್ಮಾರ, ಕಂಸಾಳ, ಪಾಂಚಾಳ, ಮೇದರ ಉಪ್ಪಾರ, ಗೌಳಿ, ಲಿಂಗಾಯತ, ವೀರಶೈವ ಲಿಂಗಾಯತ ಪಂಚಮಸಾಲಿ ಸೇರಿಸಲಾಗಿದೆ. ಇದರ ಜತೆಗೆ ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ, ಕುಳವಾಡಿ ಜನಾಂಗವಿದೆ. ನಂತರದಲ್ಲಿ ಕ್ರಿಶ್ಚಿಯನ್, ಬಂಟ್/ಬಂಟ್, ಪರಿವಾರ ಬಂಟ್, ಜೈನರು (ದಿಗಂಬರರು), ಸಾತಾನಿ, ಚಾತ್ರದ ಶ್ರೀವೈಷ್ಣವ / ಚಾತ್ತಾದ ವೈಷ್ಣವ ಶಾತ್ತಾದ ವೈಷ್ಣವ / ಶಾತ್ರಾದ ಶ್ರೀವೈಷ್ಣವ, ಕದ್ರಿ ವೈಷ್ಣವ, ಸಮೆರಾಯ, ಸಾತ್ತದವಲ್, ಸಾತ್ತದವನ್, ವೈಷ್ಣವ ಎಂದು ಹೆಸರಿಸಲಾಗಿದೆ.

ಧರ್ಮಾಧಾರಿತ ಮೀಸಲಾತಿ ನೀಡುವುದು ಸಂವಿಧಾನಬಾಹಿರವಾದ್ಧರಿಂದ ಮುಸ್ಲಿಂ ಸಮುದಾಯವನ್ನು ಮೀಸಲಾತಿಯಿಂದ ಹೊರಗಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ ವೀರಶೈವ ಲಿಂಗಾಯತರ ಜತೆಗೆ ಕ್ರಿಶ್ಚಿಯನ್‌ ಹಾಗೂ ಜೈನ(ದಿಗಂಬರರು) ಸಮುದಾಯವನ್ನು ಸೇರಿಸಲಾಗಿದೆ. ಈ ಕುರಿತು ಕಾಂಗ್ರೆಸ್‌ ವಲಯದಲ್ಲಿ ಬಿರುಸಿನ ಚರ್ಚೆ ನಡೆದಿದೆ.

ಮುಸ್ಲಿಮರನ್ನು ತೆಗೆದ ನಂತರ ಕ್ರೈಸ್ತ ಹಾಗೂ ಜೈನರನ್ನು ಉಳಿಸಿಕೊಳ್ಳಲಾಗದು. ಅವರನ್ನು ತೆಗೆದಿಲ್ಲ ಎಂದರೆ ಇದು ಮುಸ್ಲಿಂ ಸಮುದಾಯವನ್ನು ಮಾತ್ರವೇ ಗುರಿಯಾಗಿಸಿ ತೆಗೆದುಕೊಂಡಿರುವ ನಿರ್ಧಾರ ಎಂಬುದು ಸ್ಪಷ್ಟವಾಗುತ್ತದೆ. ಈ ಕುರಿತು ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ. ಈ ವಿಚಾರವನ್ನು ಮುನ್ನೆಲೆಗೆ ತರುವ ಕುರಿತು ಚರ್ಚೆ ನಡೆದಿದೆ. ನಾಯಕರ ಸೂಚನೆಗೆ ಅನುಗುಣವಾಗಿ ನಿಲುವನ್ನು ವ್ಯಕ್ತಪಡಿಸಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Reservation: ಒಬಿಸಿ ಮೀಸಲಾತಿ ಪುನರ್‌ ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ; 2ಸಿ ಪ್ರವರ್ಗಕ್ಕೆ ಶೇ.6, 2ಡಿ ಪ್ರವರ್ಗಕ್ಕೆ ಶೇ.7 ಮೀಸಲಾತಿ

Exit mobile version