Site icon Vistara News

Muttiah Muralitharan : ಚಾಮರಾಜ ನಗರದಲ್ಲಿ ಮುತ್ತಯ್ಯ ಮುರಳೀಧರನ್‌ ಉದ್ಯಮ; 8 ತಿಂಗಳಲ್ಲಿ ಆರಂಭ

muttaiah muralidharan

ಚಾಮರಾಜನಗರ: ಟೆಸ್ಟ್‌ನಲ್ಲಿ 800 ವಿಕೆಟ್‌, ಏಕದಿನ ಪಂದ್ಯಗಳಲ್ಲಿ 534 ವಿಕೆಟ್‌ ಪಡೆದು ಮಿಂಚಿದ ಜಗತ್ತಿನ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ (Legendary Cricket Spinner) ಒಬ್ಬರಾದ ಶ್ರೀಲಂಕಾದ ಮಾಜಿ ಕ್ರಿಕೆಟಿಗ (former lankan Cricketer) ಮುತ್ತಯ್ಯ ಮುರಳೀಧರನ್ (Muttiah Muralitharan) ಇದೀಗ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ (Industry in Chamarajanagar) ಮಾಡಿದ್ದು, ಅದು ಇನ್ನು ಎಂಟು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಚಾಮರಾಜ ನಗರದ ಕೆಲ್ಲಂಬಳ್ಳಿ ಇಂಡಸ್ಟ್ರಿಯಲ್ ಏರಿಯಾದ ಬದನಗುಪ್ಪೆಯಲ್ಲಿ M/S ಮುತ್ತಯ್ಯ ಬೆವರೇಜ್ ಅಂಡ್ ಕಾನ್ಫೆಕ್ಷನರಿ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರ 46 ಎಕರೆ ಭೂಮಿ ಮಂಜೂರು ಮಾಡಿದೆ. ಇದು ಮುತ್ತಯ್ಯ ಮುರಳೀಧರನ್‌ ಅವರಿಗೆ ಸೇರಿದ ಕಂಪನಿಯಾಗಿದ್ದು, ಇಲ್ಲಿ ಮುರಳೀಧರನ್‌ ಅವರು ಆಲ್ಕೋಹಾಲ್‌ರಹಿತ ಪಾನೀಯ ಮತ್ತು ತಂಪು ಪಾನೀಯಗಳ ಉತ್ಪಾದನೆ ಮತ್ತು ಬಾಟ್ಲಿಂಗ್‌ (Manufacture and Bottling of Non Alcoholic Beverages and soft drinks) ಉದ್ಯಮ ಆರಂಭಿಸಲಿದ್ದಾರೆ.

ಈ ವಿಷಯವನ್ನು ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದು, ಈಗಾಗಲೇ 46.೩ ಎಕರೆ ಭೂಮಿಯನ್ನು ಅವರಿಗೆ ನೀಡಲಾಗಿದ್ದು, ಅಲ್ಲೀಗ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇನ್ನು ಎಂಟು ತಿಂಗಳಲ್ಲಿ ಅಂದರೆ ಮುಂದಿನ ಏಪ್ರಿಲ್‌ ವೇಳೆ ಉದ್ಯಮ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು. 400 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಉದ್ಯಮ ನಿರ್ಮಾಣವಾಗುತ್ತಿದ್ದು, 900ರಿಂದ 1000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ತಂಪು ಪಾನೀಯ ಕಂಪನಿ ಆರಂಭವಾಗುವ ಹಂತದಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದರು.

ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್

ಮುತ್ತಯ್ಯ ಮುರಳೀಧರನ್ ಶ್ರೀಲಂಕಾದಲ್ಲಿ ಸಿಲೋನ್ ಬೆವರೇಜ್ ಕ್ಯಾನ್ (ಪ್ರೈ) ಲಿಮಿಟೆಡ್‌ ಎಂಬ ಉದ್ಯಮವನ್ನು ನಡೆಸುತ್ತಿದ್ದಾರೆ. ರಿಲಯನ್ಸ್‌ ಕಂಪನಿಗೆ ಸೇರಿದ ಕ್ಯಾಂಪಾ ಎಂಬ ತಂಪು ಪಾನೀಯ ಬಾಟ್ಲಿಂಗ್‌ ನಡೆಸುತ್ತಿದ್ದಾರೆ. ಶ್ರೀಲಂಕಾದ ಬಳಿಕ ಈಗ ಕರ್ನಾಟಕದಲ್ಲೂ ಬಾಟ್ಲಿಂಗ್‌ ಉದ್ಯಮ ಸ್ಥಾಪನೆ ಮೂಲಕ ಕ್ಯಾಂಪಾದ ಮಾರ್ಕೆಟಿಂಗ್‌ನ್ನು ವಿಸ್ತರಿಸಲಿದ್ದಾರೆ. ಇದರ ಜತೆಗೆ ರಿಲಯನ್ಸ್‌ನ ಇತರ ಉತ್ಪನ್ನಗಳ ಬಾಟ್ಲಿಂಗ್‌ ಕೂಡಾ ನಡೆಯಲಿದೆ.

ಸದ್ಯಕ್ಕೆ ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಚಾಮರಾಜ ನಗರದಲ್ಲಿ ಬಾಟ್ಲಿಂಗ್‌ ಪ್ಲಾಂಟ್‌ ಸ್ಥಾಪಿಸುವ ಮೂಲಕ ಎರಡೂ ರಾಜ್ಯಗಳಿಗೆ ಪೂರೈಕೆ ಮಾಡುವ ಪ್ಲ್ಯಾನ್‌ ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Hotel Business : ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹೋಟೆಲ್‌ ತೆರೆದ ಭಾರತ ತಂಡದ ಮಾಜಿ ಕ್ರಿಕೆಟಿಗ

ಧಾರವಾಡದಲ್ಲೂ ಉದ್ಯಮ ಸ್ಥಾಪನೆಗೆ ಪ್ರಸ್ತಾವನೆ

ಚಾಮರಾಜ ನಗರದ ಉದ್ಯಮ ಸ್ಥಾಪನೆ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಮುತ್ತಯ್ಯ ಮುರಳೀಧರನ್‌ ಅವರು ಈಗ ಧಾರವಾಡದ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಅಲ್ಯುಮಿನಿಯಂ ಕ್ಯಾನ್ಸ್‌ ಎಂಡ್‌ ಬೆವರೇಜಸ್‌ ಫಿಲ್ಲಿಂಗ್‌ ಪ್ಲ್ಯಾಂಟ್‌ ಸ್ಥಾಪನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮುತ್ತಯ್ಯ ಮುರಳೀಧರನ್‌ ಅವರು ಇತ್ತೀಚೆಗೆ ಧಾರವಾಡಕ್ಕೆ ಬಂದಾಗ

440 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉದ್ಯಮಕ್ಕೆ 26 ಎಕರೆ ಜಾಗ ಬೇಕು ಎಂದು ಮುರಳೀಧರನ್‌ ಅವರು ಪ್ರಸ್ತಾವನೆ ಇಟ್ಟಿದ್ದಾರೆ. ಈ ಉದ್ಯಮದ ಮೂಲಕ 400ರಿಂದ 500 ಜನರಿಗೆ ಉದ್ಯೋಗ ಸಿಗಲಿದೆ ಎನ್ನಲಾಗುತ್ತಿದೆ. ಮುತ್ತಯ್ಯ ಮುರಳೀಧರನ್‌ ಅವರು ಈಗಾಗಲೇ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.

ಕೈಗಾರಿಕಾಭಿವೃದ್ಧಿ ಮಂಡಳಿಯು ಈಗಾಗಲೇ 16.70 ಎಕರೆ, 2.64 ಎಕರೆ ಹಾಗೂ 6.15 ಎಕರೆ ಜಾಗ ಇರುವ ಮೂರು ಪ್ಲಾಟ್‌ಗಳನ್ನು ಗುರುತಿಸಿದ್ದು, ಇದಕ್ಕೆ 3000 KVA ವಿದ್ಯುತ್‌ ಮತ್ತು ದಿನಕ್ಕೆ 20 ಲಕ್ಷ ಲೀಟರ್‌ ನೀರು ಸರಬರಾಜು ಮಾಡುವ ಪ್ಲ್ಯಾನ್‌ ಸಿದ್ಧಪಡಿಸಿದೆ. ಇದಕ್ಕೆ ಅಂತಿಮ ಅನುಮತಿ ನೀಡಬೇಕಾಗಿದೆ.

ಧಾರವಾಡ ಪ್ಲ್ಯಾಂಟ್‌ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲೂ ವಿತರಣೆ ಜಾಲವನ್ನು ವಿಸ್ತರಿಸಲು ಅವಕಾಶವಾಗಲಿದೆ ಎಂಬ ನಿರೀಕ್ಷೆ ಇದೆ.

Exit mobile version