ಬೆಳಗಾವಿ: ನನ್ನ ಮೇಲಿನ ಗುಂಡಿನ ದಾಳಿ ನಡೆಸಿದ್ದು ನಮ್ಮವರೇ ಆಗಿದ್ದಾರೆ ಎಂದು ಉದ್ಯಮಿ, ಚಿತ್ರನಟ ಶಿವರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿನ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ (ಜು.12) ರಾತ್ರಿ ಶಿವರಂಜನ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದು, ಶಿವರಂಜನ್ ಬೋಳಣ್ಣವರ ತಪ್ಪಿಸಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.
ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಂಜನ್ ಅವರು, ತಮ್ಮ ಏಳಿಗೆಯನ್ನು ಸಹಿಸದೇ ನನ್ನ ಸಹೋದರನೇ ಈ ಕೃತ್ಯಕ್ಕೆ ಪ್ರಚೋದಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಶಿವರಂಜನ್ ಅವರು ಪಟ್ಟಣದಲ್ಲಿ ಹಲವು ಫೈನಾನ್ಸ್, ಪೆಟ್ರೋಲ್ ಬಂಕ್ ಹೊಂದಿದ್ದು, ಆರ್ಥಿಕವಾಗಿ ಸದೃಢರಾಗಿದ್ದರು.
ಇದನ್ನೂ ಓದಿ | ಬೆಳಗಾವಿ: ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ
ಆಸ್ತಿ ವಿವಾದದ ಕಾರಣ ಉಂಟಾದ ಹಲವು ವರ್ಷಗಳ ಹಿಂದಿನ ದ್ವೇಷವೇ ನನ್ನ ಮೇಲೆ ಗುಂಡಿನ ದಾಳಿ ನಡೆಯಲು ಕಾರಣ. ನನ್ನ ಸಹೋದರನ ಕುಮ್ಮಕ್ಕಿನಿಂದ ಆತನ ಪತ್ನಿಯ ತಮ್ಮನೇ ಈ ಕೃತ್ಯ ಎಸಗಿದ್ದಾನೆ. ದಾಳಿ ನಡೆಸಿದಾಗ ಅತ್ತಿತ್ತ ಓಡಾಡಿ ನಾನು ತಪ್ಪಿಸಿಕೊಂಡೆ. ಹೀಗಾಗಿ ಗುಂಡು ತಗುಲಿಲ್ಲ. ಪಟ್ಟಣದ ಇಂಚಲ ರಸ್ತೆಯ ನಮ್ಮ ನಿವಾಸದ ಮುಂದೆ ಬೈಕ್ ಮೇಲೆ ಬಂದ ಆರೋಪಿಗಳು ಗುಂಡು ಹಾರಿಸಿ ಪರಾರಿಯಾದರು. ನನ್ನ ಸಹೋದರ ಸಂಬಂಧಿ ಇದರಲ್ಲಿ ಇರುವ ಬಗ್ಗೆ ದೂರು ನೀಡಿದ್ದೇನೆ. ಎಫ್.ಐ.ಆರ್. ಸಹ ದಾಖಲಾಗಿದೆ ಎಂದರು.
ಗುಂಡಿನ ದಾಳಿ ಪ್ರಕರಣ ಸಂಬಂಧ ಎಸ್ಪಿ ಡಾ. ಸಂಜೀವ್ ಪಾಟೀಲ ಪ್ರತಿಕ್ರಿಯಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಕಲೆ ಹಾಕಲಾಗಿದೆ. ಶಂಕಿತ ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ನಾಪತ್ತೆಯಾಗಿದ್ದ ಬೆಳಗಾವಿ ಸೇನಾಧಿಕಾರಿ ಸೂರ್ಜಿತ್ ಸಿಂಗ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ