Site icon Vistara News

MB Patil: ನನ್ನ-ಡಿಕೆಶಿ ಸಂಬಂಧ ಚೆನ್ನಾಗಿದೆ, ಪ್ರತಾಪ್‌ ಸಿಂಹಗೆ ತಲೆ ಕೆಟ್ಟಿದೆ ಎಂದ ಎಂ.ಬಿ ಪಾಟೀಲ್‌

MB Patil pratapsimha

#image_title

ಬೆಂಗಳೂರು: ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಆದರೆ, ಮೈಸೂರು ಸಂಸದ ಪ್ರತಾಪ ಸಿಂಹ (MP Pratapsimha) ಅವರ ತಲೆ ಮಾತ್ರ ಕೆಟ್ಟಿದೆ- ಹೀಗೆಂದು ಹೇಳಿದ್ದಾರೆ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ (MB Patil).

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎಂ.ಬಿ.ಪಾಟೀಲ್ ಹೆಗಲ ಮೇಲೆ‌ ಬಂದೂಕು ಇಟ್ಟು ಡಿಕೆ ಶಿವಕುಮಾರ್‌ಗೆ ಶೂಟ್ ಮಾಡಿದ್ದಾರೆ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಅವರು ಭಾನುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದರು. ಎಂ.ಬಿ. ಪಾಟೀಲ್‌ ಅವರು ಪದೇಪದೆ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿಯೇ ಇರುತ್ತಾರೆ ಎಂದು ಹೇಳುತ್ತಿರುವುದನ್ನು ಉಲ್ಲೇಖಿಸಿ ಪ್ರತಾಪ್‌ ಸಿಂಹ ಈ ಮಾತು ಹೇಳಿದ್ದರು. ಅದರ ಜತೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್‌ ಅವರು ಗುಸುಗುಸು ಮಾತನಾಡುವುದನ್ನು ʻಡೋಂಟ್‌ ಡಿಸ್ಟರ್ಬ್‌ʼ ಎಂದು ಹೇಳುವ ಮೂಲಕ ತಡೆದಿದ್ದರು. ಇದರ ಆಧಾರದಲ್ಲಿ ಪ್ರತಾಪ್‌ ಸಿಂಹ ಅವರು ಎಂ.ಬಿ ಪಾಟೀಲರನ್ನು ಕೆಣಕಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಬಿ. ಪಾಟೀಲ್‌ ಅವರು, ʻʻಸಂಸದ ಪ್ರತಾಪ ಸಿಂಹಗೆ ತಲೆ ಕೆಟ್ಟಿದೆ. ಪ್ರತಾಪ ಸಿಂಹ ಅವರದು ಚಿಲ್ಲರೆ ಮನಸ್ಥಿತಿ ಎಂದರು. ʻʻನನ್ನ ಹಾಗೂ ಡಿ.ಕೆ.ಶಿವಕುಮಾರ್ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನ ಅಭಿಪ್ರಾಯಗಳು ಇರಬಹುದು, ಇಲ್ಲಾ ಅಂತ ಹೇಳಲ್ಲ. ಅದು ಪಕ್ಷದ ಒಳಗೆ. ಆದರೆ ನಮ್ಮ ಸಂಬಂಧ ಚೆನ್ನಾಗಿದೆʼʼ ಎಂದು ವಿವರಿಸಿದರು.

ಹೊಡೆಯುವುದಿದ್ದರೆ ಡೈರೆಕ್ಟೇ ಹೊಡೆಯುತ್ತೇನೆ

ಸಿದ್ದರಾಮಯ್ಯ ಅವರು ಎಂ.ಬಿ ಪಾಟೀಲರ ಹೆಗಲಲ್ಲಿ ಬಂದೂಕು ಇಟ್ಟು ಹೊಡೆಯುತ್ತಾರೆ ಎಂಬ ಅಪಹಾಸ್ಯಕ್ಕೆ ಉತ್ತರಿಸಿದ ಅವರು, ʻʻಸಿದ್ದರಾಮಯ್ಯ ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡುವಂತವರಲ್ಲ. ನಾನು ಅಷ್ಟೆ ಏನೇ ಇದ್ದರು ಡೈರೆಕ್ಟ್ ಆಗಿಯೇ ಹೊಡೆಯುತ್ತೇ‌ನೆ. ನನಗೂ ಆ ತಾಕತ್ತಿದೆʼʼ ಎಂದು ಹೇಳಿದರು.

ಐದು ವರ್ಷ ಸಿಎಂ ಬಗ್ಗೆ ಮತ್ತೆ ಮಾತನಾಡುವುದಿಲ್ಲ

ʻʻಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹಿಂದೆ ನಾನು ಹೇಳಿದ್ದು ನಿಜ. ಆದರೆ, ಹಿಂದೆ ನಾನು ಏನು ಹೇಳಿದ್ದೇನೊ ಅದಕ್ಕೆ ಈಗಾಗಲೇ ಕ್ಲಾರಿಫಿಕೇಶನ್ ಕೊಟ್ಟಿದ್ದೇನೆ. ಅದರ ಬಗ್ಗೆ ಈಗ ಮತ್ತೆ ಮಾತನಾಡಲ್ಲʼʼ ಎಂದರು ಎಂ.ಬಿ. ಪಾಟೀಲ್‌.

ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸಿಎಂ ಆಗಿಯೇ ಮುಂದುವರಿಯಲಿದ್ದಾರೆ ಎಂಬ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ ಮಹದೇವಪ್ಪ ಹೇಳಿಕೆ ವಿಚಾರ ಅವರಿಗೆ ಬಿಟ್ಟಿದ್ದು.. ಅದರ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಅವರ ಬಳಿಯೇ ಕೇಳಿ ಎಂದರು.

ಹೈಕಮಾಂಡ್‌ ಅಧಿಕಾರ ಹಂಚಿಕೆ ಪ್ರಕಟಿಸಿಲ್ಲ

ʻʻಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ವಿಚಾರದಬಗ್ಗೆ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಅವತ್ತು ಕೆಸಿ ವೇಣುಗೋಪಾಲ್ ಪ್ರೆಸ್ ಮೀಟ್ ನಲ್ಲಿ ಏನು ಹೇಳಿದ್ರೋ ಅಷ್ಟೇ ನಮಗೂ ಮಾಹಿತಿ ಇರುವುದುʼʼ ಎಂದು ಹೇಳಿದ ಅವರು, ಈ ಬಗ್ಗೆ ಮಾತಾಡಬಾರದು ಅಂತ ಹೈಕಮಾಂಡ್ ಯಾವ ಡೈರೆಕ್ಷನ್ನೂ ಕೊಟ್ಟಿಲ್ಲ ಎಂದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ

ಅನ್ನ ಭಾಗ್ಯ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ, ಅಸಹಕಾರ ತೋರುತ್ತಿದೆ. ಆದರೆ, ಮುಖ್ಯಮಂತ್ರಿಗಳು ಎಲ್ಲಿಂದಾದರೂ ಅಕ್ಕಿಯನ್ನು ತರಿಸುವ ಬಗ್ಗೆ ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ. ಛತ್ತೀಸ್‌ಗಢದಿಂದ ಅಕ್ಕಿ ಖರೀದಿಗೆ ಸಿದ್ಧವಾಗಿದ್ದೇವೆ ಎಂದು ವಿವರಿಸಿದರು.

ʻಕೇಂದ್ರ ಸರ್ಕಾರ ಪುಕ್ಕಟೆ ಅಕ್ಕಿ ಕೊಡೋದು ಬೇಡ, ಹಣವನ್ನೇ ಕೊಡುತ್ತೇವೆ. ಈ ಬಗ್ಗೆ ಬಿಜೆಪಿ ಸಂಸದರು ಮಾತನಾಡುವ ಸದ್ಬುದ್ಧಿ ಪ್ರದರ್ಶಿಸಲಿʼʼ ಎಂದು ಹೇಳಿದರು ಎಂ.ಬಿ. ಪಾಟೀಲ್‌.

ನನಗೆ ಚೇಳು ಕಚ್ಚಿಲ್ಲ; ಸಂತೋಷ್‌ಗೆ ಪಾಟೀಲ್‌ ತಿರುಗೇಟು

ಎಂ.ಬಿ. ಪಾಟೀಲ್‌ ಅವರು ಇತ್ತೀಚೆಗೆ ಒಂದು ಸಭೆಯಲ್ಲಿ ಮಾತನಾಡುತ್ತಾ, ʻʻರಾಜ್ಯದಲ್ಲಿ ಅದಾನಿ ಕೈಗಾರಿಕೆ ಸ್ಥಾಪಿಸಿದರೂ ಸ್ವಾಗತಿಸುತ್ತೇವೆʼʼ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಅವರು, ಇದು ರಾಹುಲ್‌ ಗಾಂಧಿ ಮುಖಕ್ಕೆ ಸರಿಯಾದ ಮಂಗಳಾರತಿ ಎಂಬರ್ಥದಲ್ಲಿ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ್‌, ʻʻಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗಿತ್ತು. ಅವರು ಸಲಹೆ-ಸೂಚನೆ ನೀಡಿದ್ದರು. ನಾನು ಪಾರದರ್ಶಕವಾಗಿ ಉದ್ಯಮ ಸ್ಥಾಪಿಸುವವರಿಗೆ ಸ್ವಾಗತ ಅಂತ ಹೇಳಿದ್ದೆ. ಯಾವುದೇ ಗ್ರೂಪ್ ಇದ್ದರೂ ಅವಕಾಶವಿದೆ ಎಂದಿದ್ದೆʼʼ ಎಂದು ವಿವರಿಸಿದರು. ಇದರ ಜತೆಗೆ ನನಗೆ ಚೇಳು ಕಚ್ಚಿದ ಹಾಗೆ ಆಗಿಲ್ಲ ಎಂದು ಇನ್ನೊಂದು ಟ್ವೀಟ್‌ಗೆ ಪ್ರತಿಕ್ರಿಯಿಸಿದರು.

ʻʻಈ ತಿಂಗಳ ಅಂತ್ಯಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡ್ತೇವೆ. ಎಷ್ಟು ಕೈಗಾರಿಕೆ ಬಂದಿವೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ. ದೆಹಲಿಯಲ್ಲಿ ನಡೆಯುವ ಸಚಿವರ ಸಭೆಯ ಬಳಿಕ ಸಮಗ್ರ ಚಿತ್ರಣ ಸಿಗಲಿದೆ. ರಾಜ್ಯ ಕೈಗಾರಿಕೆಯಲ್ಲಿ ಉನ್ನತ ಸ್ಥಾನ ಗಳಿಸಲಿದೆʼʼ ಎಂದರು.

ರಾಜ್ಯದಲ್ಲಿ ಏಕಗವಾಕ್ಸಿ ಯೋಜನೆ ಬಗ್ಗೆ ಚರ್ಚೆ ಆಗಿದೆ. 7 ವಲಯಗಳನ್ನು ಕೈಗಾರಿಕೆಗೆ ಗುರುತಿಸಲಾಗಿದೆ. ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ ಅವರು, ಕೈಗಾರಿಕೆಗಳು ಬರಬೇಕು, ಬೆಂಗಳೂರು ಜೊತೆ ಇತರ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎಂದರು.

ಇದನ್ನೂ ಓದಿ : Father’s Day 2023: ಅಪ್ಪನ ಪ್ರೀತಿಯ ಸೆಂಟಿಮೆಂಟ್‌ ಸಿನಿಮಾಗಳಿವು; ಫಾದರ್ಸ್‌ ಡೇ ಸ್ಪೆಷಲ್‌!

Exit mobile version