ಶಿವಮೊಗ್ಗ: ಬಿಜೆಪಿಯಲ್ಲಿ ಒಂದು ಕೋಟಿ ಕಾರ್ಯಕರ್ತರಿದ್ದಾರೆ. ಎಲ್ಲ ಕಾರ್ಯಕರ್ತರ ಭವಿಷ್ಯವನ್ನು ನೋಡಲು ಆಗುತ್ತದೆಯೇ? ನನ್ನ ಪುತ್ರ ಕೆ.ಇ. ಕಾಂತೇಶ್ ಕೂಡ ಕೋಟಿ ಕಾರ್ಯಕರ್ತರಲ್ಲಿ ಒಬ್ಬ. ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಅಂತ ಹೇಳಲ್ಲ. ಆದರೆ ಒಂದೇ ಕುಟುಂಬಕ್ಕೆ ಪಕ್ಷ ಸೀಮಿತವಾಗಿರಬಾರದು ಎಂಬುದು ಪಕ್ಷದ ನಿಲುವು. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಬಹುತೇಕ ಯಶಸ್ವಿಯಾಗಿದೆ. ಇನ್ನು ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರು. ಆದರೆ ನಾನು ಬೇಡವೆಂದು ಹೇಳಿದ್ದಾಗಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದರು.
ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜನೆ ಮಾಡಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರೂ ಸಹ ನಾನೇ ಬೇಡ ಎಂದು ಹೇಳಿದೆ. ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಹಲವು ಮಹಿಳೆಯರಿಗೆ ಅವಕಾಶ ನೀಡಿದೆ ಎಂದು ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ: Tipu Sultan: ಸಿಎಂ ಆದರೆ ಮತ್ತೆ ಟಿಪ್ಪು ಜಯಂತಿ ಆಚರಿಸ್ತೀರ? ಎಂಬ ಪ್ರಶ್ನೆಗೆ ಜಾಣ ಉತ್ತರ ಕೊಟ್ಟ ಸಿದ್ದರಾಮಯ್ಯ
ನನಗೆ ಚುನಾವಣೆ ನಿಲ್ಲುವ ಆಸೆ ಇರಲಿಲ್ಲ
ನನಗೆ ಚುನಾವಣೆ ನಿಲ್ಲುವ ಆಸೆ ಇರಲಿಲ್ಲ. ಗೆಲ್ಲುವ ವಿಶ್ವಾಸವೂ ಇರಲಿಲ್ಲ. ಆದರೆ, ಮುಖಂಡರ ಸೂಚನೆಯಂತೆ ಸ್ಪರ್ಧೆ ಮಾಡಬೇಕಾಯಿತು. ಆದರೆ ಮೊದಲ ಚುನಾವಣೆಯಲ್ಲೇ ಗೆದ್ದೆ. ಅಲ್ಲಿಂದ ಇಲ್ಲಿಯವರೆಗೆ ಹಿರಿಯರ ಸೂಚನೆಯನ್ನು ಪಾಲಿಸಿಕೊಂಡು ಬಂದಿದ್ದೇನೆ. ಮುಖಂಡರ ಆಜ್ಞೆಯಂತೆ ದೇವೇಗೌಡರ ವಿರುದ್ಧವೂ ಸ್ಪರ್ಧೆ ಮಾಡಿದ್ದೆ. ಈಗ ಹಿರಿಯರ ಆಜ್ಞೆಯಂತೆ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದೇನೆ. ಆಕ್ರೋಷಿತ ಕಾರ್ಯಕರ್ತರನ್ನೂ ಸಮಾಧಾನ ಪಡಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ
ನನಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುನಿಸು ಸ್ವಲ್ಪ ಕಸಿವಿಸಿ ಆಯ್ತು. ಹೀಗಾಗಿ ಅವರಿಗೆ ಬಹಿರಂಗ ಪತ್ರ ಬರೆದೆ. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ವಿಶೇಷ ಅನ್ನಿಸಿದೆ. ನಾನು ಸಾಮಾನ್ಯ ಕಾರ್ಯಕರ್ತನಂತೆ ವರ್ತಿಸಿದ್ದೆ ಅಷ್ಟೇ. ಸಂಘ ಪರಿವಾರದ ಹಿರಿಯರೂ ಮನೆಗೆ ಬಂದು ಶ್ಲಾಘಿಸಿದರು. ಶುಕ್ರವಾರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಅಭಿನಂದಿಸಿದರು. ಇದು ಬಿಜೆಪಿ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಯಡಿಯೂರಪ್ಪ ಎಂದಿಗೂ ಜಾತಿವಾದಿಯಾಗಿಲ್ಲ
ನಾನು ರಾಯಣ್ಣ ಬ್ರಿಗೇಡ್ ಮಾಡಿದ್ದು, ಹಿಂದುಳಿದವರ ಸಂಘಟನೆಗಾಗಷ್ಟೇ. ಅದು ಕೂಡ ರಾಜಕೀಯೇತರ ಸಂಘಟಬೆಯಾಗಿತ್ತು. ಎಲ್ಲ ಪಕ್ಷದವರೂ ಆ ಸಂಘಟನೆಯಲ್ಲಿ ಇದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂದೂ ಜಾತಿ ಪರ ಮಾಡಿಲ್ಲ. ಅವರು ಎಂದಿಗೂ ಜಾತಿವಾದಿಯಾಗಿಲ್ಲ. ನರೇಂದ್ರ ಮೋದಿ ನೀತಿಯೇ ಯಡಿಯೂರಪ್ಪ ಅವರದ್ದಾಗಿದೆ. ಎಲ್ಲ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬುದು ಮೋದಿ ಪಾಲಿಸಿ. ಅದನ್ನೇ ಯಡಿಯೂರಪ್ಪ ಅವರೂ ಪಾಲಿಸಿಕೊಂಡು ಬಂದಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಹಿಂದೆ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿತ್ತು. ಕಾಂಗ್ರೆಸ್‌ನಿಂದ ಯಾರು ನಿಂತರೂ ಗೆಲ್ಲುತ್ತಿದ್ದರು. ಬಿಜೆಪಿಯಲ್ಲಿ ಸ್ಪರ್ಧಿಸಲೂ ಅಭ್ಯರ್ಥಿಯನ್ನು ಹುಡುಕಬೇಕಿತ್ತು. ಆತ್ಮವಿಶ್ವಾಸದಿಂದ ಕಟ್ಟಿದ ಬಿಜೆಪಿ ಈಗ ಬೆಳೆದಿದೆ. ನಮ್ಮ ಪಾರ್ಟಿಗೆ ಬರುತ್ತೇವೆ ಅನ್ನುವವರಿಗೆ ಬೇಡ ಅನ್ನಲಿಕ್ಕೆ ಆಗುತ್ತದೆಯೇ? ನಾವಾಗಿ ಯಾರನ್ನೂ ಕರೆದಿರಲಿಲ್ಲ. ಅವರಾಗೇ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದರು. ಆಮೇಲೆ ಅವರನ್ನು ಗೆಲ್ಲಿಸಿದ್ದೇವೆ. ಬಿಜೆಪಿಗೆ ಆದರ್ಶವಿದೆ, ಹೀಗಾಗಿ ಬೆಳೆದಿದೆ ಎಂದು ಹೇಳಿದರು.
ಕೋರ್ಟ್, ತನಿಖೆ ಬಗ್ಗೆ ಕಾಂಗ್ರೆಸ್‌ಗೆ ನಂಬಿಕೆ ಇದೆಯೇ? ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ನನಗೆ ಕೋರ್ಟ್ ಕ್ಲೀನ್‌ಚಿಟ್ ನೀಡಿದೆ. ಇದ್ಯಾವುದಕ್ಕೂ ನಿಮಗೆ ನಂಬಿಕೆ ಇಲ್ಲ. ಮೋದಿ ಕರೆ ಮಾಡಿದ್ದ ಬಗ್ಗೆ ಇಡೀ ದೇಶ ಮೆಚ್ಚಿದೆ. ಕಾಂಗ್ರೆಸ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಟೀಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ ಎಂದರು.
ದೇಶದ್ರೋಹಿಗಳ ವಿರೋಧಿಯಷ್ಟೇ
ನನ್ನ ವೈಯಕ್ತಿಕ ತೀರ್ಮಾನ ಬೇರೆಯಿರಬಹುದು. ಆದರೆ ಹಿರಿಯರ ಸೂಚನೆಯನ್ನು ಪಾಲಿಸಲೇಬೇಕು. ಹಿಂದುತ್ವ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಭಾವನೆ ಬಿಜೆಪಿಯಲ್ಲಿ ಇದೆ. ಆದರೆ, ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳಿಗೆ ನನ್ನ ಧಿಕ್ಕಾರವಿದೆ. ನನ್ನ ಮನೆಗೆ ಮುಸ್ಲಿಮರೂ ಬರುತ್ತಾರೆ, ಕ್ರೈಸ್ತರೂ ಬರುತ್ತಾರೆ. ನಾನು ಮಸಲ್ಮಾನರ ವಿರೋಧಿಯಲ್ಲ, ಕ್ರಿಶ್ಚಿಯನ್ನರ ವಿರೋಧಿಯಲ್ಲ. ನಾನು ದೇಶದ್ರೋಹಿಗಳ ವಿರೋಧಿಯಷ್ಟೇ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.