ಮೈಸೂರು: ಜಿಲ್ಲೆಯಲ್ಲಿ ಸ್ವಪಕ್ಷ ನಾಯಕರ ನಡುವೆಯೇ ಕಿತ್ತಾಟಗಳು ಜೋರಾಗುತ್ತಿವೆ. ಗುಂಬಜ್ ಮಾದರಿ ಬಸ್ ತಂಗುದಾಣದ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ಕಿತ್ತಾಡಿಕೊಂಡಿದ್ದರು. ಈಗ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಎಂಎಲ್ಸಿ ಎಚ್.ವಿಶ್ವನಾಥ್ ನಡುವೆ ವಾಕ್ಸಮರ ನಡೆಯುತ್ತಿದೆ. ಈ ನಡುವೆ ಬಿಜೆಪಿಯಲ್ಲಿದ್ದ ಈ ಗಾಳಿ ಕಾಂಗ್ರೆಸ್ನತ್ತಲೂ (Mysore Congress) ಬೀಸಿದೆ. ಚುನಾವಣಾ ಅಭ್ಯರ್ಥಿ ಹೆಸರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಘೋಷಣೆ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಹೋದಲ್ಲೆಲ್ಲ ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಜನಾಶೀರ್ವಾದ ಕೇಳುತ್ತಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ್, ಟಿಕೆಟ್ ಘೋಷಣೆ ಮಾಡುವ ಅಧಿಕಾರ ಎಐಸಿಸಿಗೆ ಮಾತ್ರ ಇದೆ ಎಂದು ಹೇಳಿದ್ದರು.
ಈ ಬೆಳವಣಿಗೆ ನಂತರವೂ ಸಿದ್ದರಾಮಯ್ಯ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಲೇ ಇದ್ದಾರೆ. ಇದೀಗ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಖಾನ್ ಕೂಡ ಸಿದ್ದರಾಮಯ್ಯ ಅವರಂತೆ ಅಭ್ಯರ್ಥಿ ಹೆಸರು ಪ್ರಸ್ತಾಪಿಸಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಕೆ. ಹರೀಶ್ಗೌಡ ಅವರಿಗೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ನೀಡಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಮಾಜಿ ಶಾಸಕ ವಾಸು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Karnataka Election | ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್; ಚಂದಾ ವಸೂಲಿಯಾಗುತ್ತಿದೆ ಎಂದ ಜಮೀರ್!
ಮೈಸೂರು ನಗರ ವ್ಯಾಪ್ತಿಯ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಒಬ್ಬರು ಮೂಲ ಕಾಂಗ್ರೆಸ್ಸಿಗರಾಗಿರುವ ಹಾಗೂ ೪ ಚುನಾವಣೆಯಲ್ಲಿ ಸ್ಪರ್ಧಿಸಿ 2013ರಲ್ಲಿ ಶಾಸಕರೂ ಆಗಿದ್ದ ವಾಸು. ಮತ್ತೊಬ್ಬರು 2018ರಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪಿದ್ದಕ್ಕಾಗಿ ಕಾಂಗ್ರೆಸ್ಸಿಗೆ ಬಂದಿರುವ ಹರೀಶ್ಗೌಡ. ಇಬ್ಬರೂ ಒಕ್ಕಲಿಗ ಸಮುದಾಯದ ನಾಯಕರು. ಆದರೆ, ವಾಸು ಡಿ.ಕೆ.ಶಿವಕುಮಾರ್ ಬಣ, ಹರೀಶ್ಗೌಡ ಸಿದ್ದರಾಮಯ್ಯ ಬಣ ಎನ್ನುವುದು ಬಹಿರಂಗ ಸತ್ಯ. ಹೀಗಿರುವಾಗ ಹರೀಶ್ಗೌಡ ಪರವಾಗಿ ಜಮೀರ್ ಹೇಳಿಕೆ ನೀಡಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ನನ್ನ ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ. ಸುಮಾರು 24 ಮಂದಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ನಾನು ಸಹ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕ. ನನಗೂ ಆಪ್ತರು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಸಹ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹರೀಶ್ಗೌಡರಿಗೆ ಟಿಕೆಟ್ ಸಿಗಲಿದೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದರು.
ಈ ಬಗ್ಗೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಮಾಜಿ ಶಾಸಕ ವಾಸು, ಜಮೀರ್ ವಿರುದ್ಧ ಕಿಡಿಕಾರಿದ್ದಾರೆ. ಜಮೀರ್ ಬಳಿ ಅವರ ಕ್ಷೇತ್ರದ ಟಿಕೆಟ್ ಕೂಡ ಇಲ್ಲ. ಬಿ ಫಾರ್ಮ್ಗೆ ಸಹಿ ಹಾಕುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಹೊರತು ಜಮೀರ್ ಅಲ್ಲ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ಮಾಜಿ ಶಾಸಕ ವಾಸು ಹಾಗೂ ಮುಖಂಡ ಹರೀಶ್ಗೌಡ ನಡುವಿನ ಟಿಕೆಟ್ ಫೈಟ್ ಜೋರಾಗಿದೆ. ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ ಆಪ್ತರಾದ ವಾಸು, ಹೈಕಮಾಂಡ್ ಮಟ್ಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಮತ್ತೊಂದೆಡೆ ಹರೀಶ್ಗೌಡ ಸಿದ್ದರಾಮಯ್ಯ ಅವರನ್ನೇ ನೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಟಿಕೆಟ್ ಪೈಪೋಟಿಯ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇದನ್ನೂ ಓದಿ | Yathindra Siddharamaiah | ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಯತೀಂದ್ರ ಸಿದ್ದರಾಮಯ್ಯ