Site icon Vistara News

Mysore Congress | ನಂಜನಗೂಡು ಕಾಂಗ್ರೆಸ್ ಟಿಕೆಟ್​ಗಾಗಿ ಭಾರಿ ಪೈಪೋಟಿ; ನಾಯಕರ ಬೆಂಬಲಿಗರ ನಡುವೆ ಜಟಾಪಟಿ

Mysore Congress

ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ (Mysore Congress) ಕಾಂಗ್ರೆಸ್ ಟಿಕೆಟ್​ಗಾಗಿ ಭಾರಿ ಪೈಪೋಟಿ ನಡೆಯುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಂಬಲಿಗರ ನಡುವೆ ಸೋಮವಾರ ಜಟಾಪಟಿ ನಡೆದಿದೆ.

ಮೈಸೂರು ಗ್ರಾಮಾಂತರ ಜಿಲ್ಲೆಯ ಚುನಾವಣಾ ವೀಕ್ಷಕರೂ ಆದ ಮಾಜಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹ ಸಭೆ ಕರೆಯಲಾಗಿತ್ತು. ಗ್ರಾಮಾಂತರ ವಿಭಾಗದ ಎಲ್ಲ 7 ವಿಧಾನಸಭಾ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹ ಮುಗಿದು ಹೋಗಿದೆ. ಆದರೆ ನಂಜನಗೂಡು ಕ್ಷೇತ್ರದ ಚರ್ಚೆ ಶುರುವಾಗುತ್ತಿದ್ದಂತೆಯೇ ಡಾ.ಎಚ್.ಸಿ.ಮಹದೇವಪ್ಪ ಬೆಂಬಲಿಗರ ಹಾರಾಟ, ಚೀರಾಟ ಜೋರಾಯಿತು.

ಡಾ.ಮಹದೇವಪ್ಪ ಅವರ ಭಾವಚಿತ್ರ ಪ್ರದರ್ಶಿಸಿದ ಬೆಂಬಲಿಗರು ರಸ್ತೆಗಳ ರಾಜ, ಅಭಿವೃದ್ಧಿಯ ಹರಿಕಾರ ಎಂದೆಲ್ಲ ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಆರ್.ಧ್ರುವನಾರಾಯಣ ಬೆಂಬಲಿಗರೂ ತಮ್ಮ ನಾಯಕನ ಪರ ಘೋಷಣೆಗಳನ್ನು ಮೊಳಗಿಸಿದರು. ಇದರಿಂದಾಗಿ ಎರಡೂ ಬಣಗಳ ನಡುವೆ ಗದ್ದಲ ಏರ್ಪಟ್ಟಿತು. ಎರಡೂ ಬಣದ ಕಾರ್ಯಕರ್ತರ ಕೂಗಾಟ ಪರಸ್ಪರ ಗಲಾಟೆಯ ಹಂತಕ್ಕೂ ತಲುಪಿತು.

ಇದನ್ನೂ ಓದಿ | SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ

ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಇಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿಲ್ಲ. ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯ ಹೇಳಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಆದರೆ ಕೂಗಾಟದ ಅಗತ್ಯವಿಲ್ಲ ಎಂದು ಮನವಿ ಮಾಡಿದರು. ನಂತರವೂ ಗಲಾಟೆ, ಗದ್ದಲ ಮುಂದುವರಿಯಿತು. ಮತ್ತೊಂದು ಕ್ಷೇತ್ರದ ವಿಚಾರ ಚರ್ಚೆಗೆ ಬಂದ ಬಳಿಕ ಎಲ್ಲರೂ ಸುಮ್ಮನಾದರು.‌

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಪ್ರಧಾನ ಕಾರ್ಯದರ್ಶಿ ಅರುಣ್ ಮಾಚಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ.ಮರಿಗೌಡ, ಮುಖಂಡರಾದ ಶಿವಪ್ರಸಾದ್​, ಹೆಡತಲೆ ಮಂಜುನಾಥ್, ಹುಣಸೂರು ಬಸವಣ್ಣ ಸೇರಿ ಹಲವರಿದ್ದರು.

ಗೌಪ್ಯ ಮಾತುಕತೆ
ಚುನಾವಣಾ ವೀಕ್ಷಕ ಚಲುವರಾಯಸ್ವಾಮಿ ಮೈಸೂರು ಗ್ರಾಮಾಂತರ ವಿಭಾಗದ 8 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಗೌಪ್ಯ ಮಾತುಕತೆ ನಡೆಸಿದರು. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ಚಾಮುಂಡೇಶ್ವರಿ, ವರುಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಮುಖಂಡರನ್ನು ಕೊಠಡಿಗೆ ಕರೆಸಿಕೊಂಡು ಯಾರಿಗೆ ಅವಕಾಶ ನೀಡಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂಬ ಮಾಹಿತಿ ಸಂಗ್ರಹಿಸಿದರು.

ಸಭೆಯ ಆರಂಭದಲ್ಲೇ ಮಾತನಾಡಿದ ಚಲುವರಾಯಸ್ವಾಮಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ನಿರ್ಣಯ ಮಾಡುವುದು ಕಾಂಗ್ರೆಸ್ ಸಂಪ್ರದಾಯ. ಅದಕ್ಕಾಗಿ ಸಭೆ ಕರೆಯಲಾಗಿದೆ. ಪ್ರತಿ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳ ಹೆಸರು ಅಂತಿಮ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಒಂದು ಅಥವಾ ಎರಡು ಹೆಸರುಗಳಿರುವ ಕ್ಷೇತ್ರಗಳ ಪಟ್ಟಿಯನ್ನು ಯಥಾವತ್ತಾಗಿ ಕಳುಹಿಸಲಾಗುವುದು. ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದರು.

ವೀಕ್ಷಕರ ಸಭೆಯಲ್ಲಿ ಯಾವುದೇ ತೀರ್ಮಾನ ಆಗುವುದಿಲ್ಲ. ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವುದು ಮಾತ್ರ ನಮ್ಮ ಕೆಲಸ. ಅಂತಿಮ ತೀರ್ಮಾನ ಕೆಪಿಸಿಸಿ ಹಾಗೂ ಎಐಸಿಸಿ ಹಂತದಲ್ಲಿ ಆಗಲಿದೆ.
|ಚಲುವರಾಯಸ್ವಾಮಿ,ಚುನಾವಣಾ ವೀಕ್ಷಕ

ಡಿ.28ರಂದು ನಗರ ವ್ಯಾಪ್ತಿಯ ಸಭೆ
ಮೈಸೂರು ನಗರ ವ್ಯಾಪ್ತಿಯ ನರಸಿಂಹರಾಜ, ಕೃಷ್ಣರಾಜ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹ ಸಭೆ ಡಿ.28ರಂದು ಬುಧವಾರ ನಡೆಯಲಿದೆ. ಕಾಂಗ್ರೆಸ್ ನಗರ ಜಿಲ್ಲೆಯ ವೀಕ್ಷಕರೂ ಆದ ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಬೆಳಗ್ಗೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಧ್ವಜಾರೋಹಣ ನೆರವೇರಿಸುವರು. ಬಳಿಕ ಮೂರೂ ಕ್ಷೇತ್ರಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸಭೆ ನಡೆಯಲಿದೆ.

ಇದನ್ನೂ ಓದಿ | Bellary Politics | ಜೀವದ ಗೆಳೆಯರು ದೂರ ದೂರವಾಗಲು ಅಹಂ ಕಾರಣವಾಯಿತೇ?

Exit mobile version