ಮೈಸೂರು: ಸೆ.26 (ನಾಳೆ)ರಿಂದ ಅಕ್ಟೋಬರ್ 2ರವರೆಗೆ ಅದ್ದೂರಿಯಾಗಿ ದಸರಾ ಹಬ್ಬ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವುದರಿಂದ ಭದ್ರತೆ, ಸಿದ್ಧತೆಗಳೆಲ್ಲ ಹೆಚ್ಚಾಗಿಯೇ ನಡೆಯುತ್ತಿದೆ. ಎಲ್ಲೆಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಇದೆ.
ಈ ಮಧ್ಯೆ ಇಂದು ಮಹಾಲಯ ಅಮಾವಾಸ್ಯೆ ನಿಮಿತ್ತ ದಸರಾ ಗಜಪಡೆಯ ತಾಲೀಮು ರದ್ದುಗೊಳಿಸಲಾಗಿದೆ. ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳು ತಾಲೀಮು ನಡೆಯುತ್ತಿತ್ತು. ಇಂದು ಅಮಾವಾಸ್ಯೆ ಆಗಿದ್ದರಿಂದ ಅವುಗಳಿಗೂ ವಿಶ್ರಾಂತಿ ಕೊಡಲಾಗಿದೆ. ಅಮಾವಾಸ್ಯೆ ದಿನ ಈ ಆನೆಗಳನ್ನು ಹೊರಗೆ ಕರೆದುಕೊಂಡು ಹೋದರೆ ತೊಂದರೆಯಾಗಬಹುದು ಎಂಬ ನಂಬಿಕೆ ಮೊದಲಿನಿಂದಲೂ ಇರುವುದರಿಂದ ತಾಲೀಮು ರದ್ದು ಮಾಡಲಾಗುತ್ತದೆ. ಯಾವ ಅಮಾವಾಸ್ಯೆಯಂದೂ ಆನೆಗಳನ್ನು ಹೊರಗೆ ಬಿಡುವುದಿಲ್ಲ.
ಚಾಮುಂಡಿ ಬೆಟ್ಟಕ್ಕೆ ಅಂಬಾರಿ ವಿಗ್ರಹ
ದಸರಾ ಮಹೋತ್ಸವ ಉದ್ಘಾಟನೆಗೆ ಇನ್ನೊಂದೇ ದಿನ ಬಾಕಿ ಇರುವ ಕಾರಣ ಅರಮನೆಯ ಖಜಾನೆಯಲ್ಲಿದ್ದ ಅಂಬಾರಿ ಚಾಮುಂಡಿ ವಿಗ್ರಹವನ್ನು ಚಾಮುಂಡಿ ಬೆಟ್ಟಕ್ಕೆ ತರಲಾಗಿದೆ. ನವರಾತ್ರಿ ಅಂಗವಾಗಿ ಶ್ರೀಚಾಮುಂಡೇಶ್ವರಿ ಅಮ್ಮನವರ ಮೂಲ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತದೆ.
ಇದನ್ನೂ ಓದಿ: ಮೆರವಣಿಗೆಗೆ ಅನುಮತಿ ನಿರಾಕರಣೆ ನಡುವೆಯೇ ಮಹಿಷ ದಸರಾ ಆಚರಣೆ: ಭಗವಾನ್ ಭಾಗಿ