Site icon Vistara News

Mysore Dasara 2022 | ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಡ್ರೋನ್‌ ಕ್ಯಾಮೆರಾ ಕಣ್ಗಾವಲು

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ (Mysore Dasara 2022) ಸೆ.26ರಿಂದ ಅ.5ರವರೆಗೆ ನಡೆಯಲಿದೆ. ಕೋವಿಡ್‌ ಕಾರಣದಿಂದ ಕಳೆದ ೨ ವರ್ಷ ಸರಳವಾಗಿ ನಡೆದಿದ್ದ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ನಗರದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರತಿಯೊಂದು ಚಲನವಲನಗಳ ಮೇಲೆ ಪೊಲೀಸರ ಕಣ್ಣಿರಲಿದೆ.

ನಗರದ ವಿವಿಧ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ತಯಾರಿ ನಡೆಸಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಯುಕ್ತ ಚಂದ್ರಗುಪ್ತ, ಮೈಸೂರು ನಗರ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತಿದೆ. ಮೈಸೂರು ನಗರದಿಂದ 1255, ಹೊರ ಜಿಲ್ಲೆಗಳಿಂದ 3580 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 650 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 5485 ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಬಾಡಿ ಪೋರ್ಸ್‌ ಕ್ಯಾಮೆರಾ

ಮೊಬೈಲ್ ಕಮಾಂಡ್ ಸೆಂಟರ್ ಬಸ್‌ ಅನ್ನು ದಸರಾ ಮಹೋತ್ಸವದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಬಸ್ಸಿನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿ ಫೋರ್ಸ್ ಕ್ಯಾಮೆರಾಗಳು, ಲಾಂಗ್ ಡಿಸ್ಟೆನ್ಸ್ ಫೋಟೊಗ್ರಫಿ ಮತ್ತು ವಿಡಿಯೊಗ್ರಫಿಗಳನ್ನು ತೆಗೆಯುವ ವ್ಯವಸ್ಥೆ ಇರಲಿದೆ.

ಅರಮನೆ ಮತ್ತು ಬನ್ನಿ ಮಂಟಪದ ಎಲ್ಲ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿಫೋರ್ಸ್ ಕ್ಯಾಮೆರಾ ವಿತರಿಸಲಾಗುತ್ತದೆ. ಅಲ್ಲಿನ ಸಂಪೂರ್ಣ ದೃಶ್ಯಾವಳಿ ಈ ಕ್ಯಾಮೆರಾಗಳಲ್ಲಿ ಮತ್ತು ಮೊಬೈಲ್ ಕಮಾಂಡ್ ಸೆಂಟರ್‌ನಲ್ಲಿ ರೆಕಾರ್ಡ್ ಆಗುವ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾಗಳಿಂದ ಕಣ್ಗಾವಲು ಮಾಡಲಾಗುವುದು. ದಸರಾ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೊಲೀಸರು ಎದ್ದು ಕಾಣುವ ರೀತಿಯಲ್ಲಿ ಎತ್ತರದ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಿ ಅದರ ಮೇಲೆ ಪೊಲೀಸರನ್ನು ಮೆಗಾ ಫೋನ್ ಸಮೇತ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಅಪರಾಧಗಳನ್ನು ತಡೆಗಟ್ಟಲು ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ.

ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ

ನಗರದ ಲಾಡ್ಜ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆ ನುರಿತ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತದೆ.

ದಸರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಪೊಲೀಸ್ ವ್ಯವಸ್ಥೆ ಸ್ಥಳಕ್ಕೆ ತೆರಳಲು ಉತ್ತಮವಾದ ಗಸ್ತು ವಾಹನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ಮುಂಚಿತವಾಗಿಯೇ 12 ಅಗ್ನಿಶಾಮಕ ದಳ ಮತ್ತು 8 ಆ್ಯಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಈಗಾಗಲೇ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ 13,140 ಸಿಸಿ ಕ್ಯಾಮೆರಾಗಳು ಇದ್ದು, ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪದ ಮೈದಾನ ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ 110 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ದಿನದ 24 ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರೌಡಿ ಪರೇಡ್‌

ರೌಡಿ ಪರೇಡ್ ನಡೆಸಿ ರೌಡಿಗಳಿಗೆ ಅಹಿತಕರ ಘಟನೆ ನಡೆಸದಂತೆ ಕಟ್ಟೆಚ್ಚರ ನೀಡಲಾಗಿದೆ. ಗರುಡಾ ಫೋರ್ಸ್ ಮತ್ತು ಎಎನ್ಎಫ್ ತಂಡಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಮಧ್ಯೆ ಶನಿವಾರ ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆಸಲಾಗಿತ್ತಾದರೂ ಪೊಲೀಸರು ಅದಕ್ಕೆ ಅನುಮತಿಯನ್ನು ನಿರಾಕರಿಸಿದ್ದಾರೆ. ಮಹಿಷ ಪ್ರತಿಮೆಯ ಸುತ್ತಲಿನ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಕಾವಲಿಗೆ ನಿಂತಿದ್ದಾರೆ. ಮಹಿಷ ಪ್ರತಿಮೆಗೆ ಮಾಲಾರ್ಪಣೆ ಸೇರಿದಂತೆ ಪುಷ್ಪಾರ್ಚನೆಗೈಯ್ಯಲು ತೆರಳಬಹುದೆಂಬ ಕಾರಣಕ್ಕೆ ಮಹಿಷ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಲಾಗಿದೆ.

ಬೆಟ್ಟಕ್ಕೆ ತೆರಳುವ ವಾಹನಗಳನ್ನು ಈಗಾಗಲೇ ಪ್ರವೇಶಕ್ಕೆ ಮುನ್ನ ಸಂಪೂರ್ಣ ತಪಾಸಣೆ ನಡೆಸಿಯೇ ಬಿಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನು ಚಾಮುಂಡಿಬೆಟ್ಟದಲ್ಲಿ ನಿಯೋಜಿಸಲಾಗಿದೆ.

ಇದನ್ನೂ ಓದಿ | Mysore Dasara 2022 | ಮೈಸೂರು ಫಲಪುಷ್ಪ ಪ್ರದರ್ಶನ; ಗುಲಾಬಿ ರಂಗಲ್ಲಿ ಕಂಗೊಳಿಸಲಿದೆ ರಾಷ್ಟ್ರಪತಿ ಭವನ

Exit mobile version