ಮೈಸೂರು: ದಸರಾ ಮಹೋತ್ಸವದ (Mysore Dasara 2022) ಅಂಬಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸೋಮವಾರ ನಡೆಸಲಾದ ಕುಶಾಲು ತೋಪು ತಾಲೀಮು ವೇಳೆ ಮದ್ದಿನ ಸದ್ದಿಗೆ ಗಜಪಡೆಗಳು ಓಡಿ ಹೋದ ಪ್ರಸಂಗ ನಡೆದಿದೆ.
ಅರಮನೆ ಹೊರ ಆವರಣದ ಕೋಟೆ ಮಾರಮ್ಮ ದೇವಾಲಯದ ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ದವು. ಸಿಎಆರ್ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಕುಶಾಲು ತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21 ಕುಶಾಲು ತೋಪುಗಳು ಸಿಡಿಸಲಾಯಿತು. ಈ ವೇಳೆ ಮೊದಲ ಬಾರಿ ಆಗಮಿಸಿದ್ದ ಸುಗ್ರೀವ, ಭೀಮ, ಪಾರ್ಥಸಾರಥಿ, ಶ್ರೀರಾಮ ಆನೆಗಳು ವಿಚಲಿತಗೊಂಡವು.
ಕುಶಾಲು ತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಭಾರಿ ಸದ್ದಿಗೆ ನಾಲ್ಕು ಆನೆಗಳು ಹಾಗೂ ಕುದುರೆಯೊಂದು ಬೆದರಿ ಇದ್ದ ಸ್ಥಳದಿಂದ ದಿಕ್ಕಾಪಾಲಾಗಿ ಓಡಾಡಿದವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಲು ಮುಂದಾದರು. ಇನ್ನುಳಿದ ಆನೆಗಳು ಮದ್ದಿನ ಸದ್ದಿಗೆ ಯಾವುದೇ ಅಳುಕಿಲ್ಲದೆ ಭಾಗಿಯಾಗಿ, ಮೊದಲ ಹಂತದ ಕುಶಾಲು ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಫ್ ಕರಿಕಾಳನ್ ಮೊದಲ ಹಂತದ ಕುಶಾಲು ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದೆ. ಇನ್ನೆರಡು ಬಾರಿ ಕುಶಾಲು ತೋಪು ಸಿಡಿಸುವ ತಾಲೀಮು ನಡೆಯಲಿದ್ದು, ಗಜಪಡೆಯ ಜತೆಗೆ ಅಶ್ವಾರೋಹಿ ದಳದ ಸಿಬ್ಬಂದಿ, ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ತಾಲೀಮಿನಲ್ಲಿ ಭಾಗಿಯಾಗಿದ್ದಾರೆ ಎಂದರು.
ದಸರಾ ಭದ್ರತೆ
ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಲಿರುವ ಭದ್ರತಾ ಕ್ರಮಗಳ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Mysore Dasara 2022 | ದಸರಾ ಉದ್ಘಾಟನೆಗೆ ಹೊಸ ಸಂಪ್ರದಾಯ; ಶುರುವಾಯ್ತು ನಾನಾ ಲೆಕ್ಕಾಚಾರ!