Site icon Vistara News

Mysore Dasara : ಮೈಸೂರು ದಸರಾದಲ್ಲಿ ಈ ಬಾರಿ ಏರ್‌ ಶೋ ವೈಭವ; ಕೇಂದ್ರ ಸರ್ಕಾರ ಅನುಮತಿ

Mysore dasara air show

ಬೆಂಗಳೂರು: ಈ ಬಾರಿಯ ಮೈಸೂರು ದಸರಾವನ್ನು (Mysore Dasara) ಸರಳವಾಗಿ ಆಚರಿಸಲು ನಿರ್ಧರಿಸಿದ್ದರೂ ಇದೀಗ ಏರ್‌ ಶೋ ಅದಕ್ಕೆ ಅದ್ಧೂರಿತನವನ್ನು ನೀಡಲಿದೆ. ಹೌದು ಈ ಬಾರಿಯ ದಸರಾದಲ್ಲಿ ಏರ್‌ ಶೋಗೆ (Air show) ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಬಾರಿಯ ದಸರಾವನ್ನು ವಿಶಿಷ್ಟವಾಗಿ ನಡೆಸಬೇಕು ಎಂಬ ದೃಷ್ಟಿಯಿಂದ ಏರ್‌ ಏರ್‌ ಶೋ ನಡೆಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದರು. ರಾಜನಾಥ್‌ ಸಿಂಗ್‌ ಅವರು ಈ ಬೇಡಿಕೆಗೆ ಸ್ಪಂದಿಸಿದ್ದು, ಅನುಮತಿಯನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಇದನ್ನ ಹೇಗೆ ನಡೆಸಬಹುದು ಎಂಬುದರ ಸ್ಥಳ ಪರಿಶೀಲನೆಗಾಗಿ ಮೈಸೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಬನ್ನಿ ಮಂಟಪ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇದರ ಜತೆಗೆ ಮೈಸೂರು ಏರ್ ಬೇಸ್​ ಗ್ರೂಪ್ ಕ್ಯಾಪ್ಟನ್ ಡಿ.ಕೆ. ಹೋಜಾ ಅವರ ಜತೆಗೂ ಚರ್ಚೆ ನಡೆಸಿದರು.

ಮೈಸೂರಿನ ದಸರಾ ಜಗದ್ವಿಖ್ಯಾತಿಯನ್ನು ಪಡೆದಿದ್ದು, ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ಏರ್‌ ಶೋ ಬಗ್ಗೆ ಪ್ಲ್ಯಾನ್‌ ಮಾಡಿದ್ದರು. ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದರು.

ಇದೀಗ ಕೇಂದ್ರ ಸರಕಾರ ಅನುಮತಿ ನೀಡಿರುವುದರಿಂದ ಮೈಸೂರಿಗರು ಮತ್ತು ರಾಜ್ಯದ ಯಾವುದೇ ಭಾಗದ ಜನ ರಕ್ಷಣಾ ಇಲಾಖೆಯ ಶಕ್ತಿಶಾಲಿ ವಿಮಾನಗಳ ಪ್ರದರ್ಶನದ ರೋಚಕತೆಯನ್ನು ಅನುಭವಿಸಲು ಅವಕಾಶ ಸಿಗಲಿದೆ.

ಆದರೆ, ಈ ಏರ್‌ ಶೋ ಯಾವಾಗ ನಡೆಯಲಿದೆ? ಎಷ್ಟು ದಿನ ನಡೆಯಲಿದೆ? ಯಾವ ಜಾಗದಲ್ಲಿ ನಡೆಯಲಿದೆ ಎನ್ನುವ ಬಗ್ಗೆ ಇನ್ನಷ್ಟೇ ಚರ್ಚೆ ನಡೆಯಬೇಕಾಗಿದೆ.

ಈ ಹಿಂದೆಯೂ ನಡೆದಿತ್ತು ಏರ್‌ ಶೋ

ಮೈಸೂರು ದಸರಾ ಸಂದರ್ಭದಲ್ಲಿ ಈ ಹಿಂದೆಯೂ ಏರ್‌ ಶೋ ನಡೆದಿತ್ತು. ಹಿಂದಿನ ಸಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 2017 ಮತ್ತು 2019ರಲ್ಲಿ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ವಾಯುಪಡೆ ವಿಶೇಷ ಏರ್ ಶೋ ನಡೆದಿತ್ತು. ಈ ಬಾರಿ ಬನ್ನಿ ಮಂಟಪ ಮೈದಾನದ ಪರಿಶೀಲನೆ ನಡೆದಿದೆ. ಆದರೆ, ಜಾಗ ಇನ್ನೂ ಅಂತಿಮವಾಗಿಲ್ಲ.

ಇಂದಿನಿಂದ ಯುವ ದಸರಾ ಆರಂಭ

ಮೈಸೂರು ದಸರಾ ಈ ಬಾರಿ ಅಕ್ಟೋಬರ್‌ 15ರಂದು ಉದ್ಘಾಟನೆಗೊಂಡು ಅಕ್ಟೋಬರ್‌ 24ರವರೆಗೆ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಸಿವೆ. ಅಕ್ಟೋಬರ್‌ 15ರಂದು ಚಾಮುಂಡಿ ಬೆಟ್ಟದಲ್ಲಿ ಹಂಸಲೇಖ ಅವರು ದಸರಾ ಉದ್ಘಾಟನೆ ನಡೆಸಲಿದ್ದಾರೆ. ಅಕ್ಟೋಬರ್‌ 24ರಂದು ಅದ್ಧೂರಿ ದಸರಾ ಮೆರವಣಿಗೆ ನಡೆಯಲಿದೆ.

ಇದರ ನಡುವೆಯೇ ಅಕ್ಟೋಬರ್‌ 6ರಿಂದ 16ರವರೆಗೆ ಯುವ ದಸರಾ ಸಂಭ್ರಮ ಜರುಗಲಿದೆ. ಶುಕ್ರವಾರ ಸಂಜೆ 5 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮ ಉದ್ಘಾಟನೆ ನಡೆಯಲಿದೆ. ಇದು ಅಕ್ಟೋಬರ್‌ 16ರವರೆಗೆ ಇರಲಿದೆ. ಸಚಿವ ಡಾ. ಎಚ್​ಸಿ ಮಹದೇವಪ್ಪ, ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಉದ್ಘಾಟನೆ ಮಾಡಲಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

Exit mobile version