Site icon Vistara News

Mysore Dasara : ಜನಪರ ಸಿನಿಮಾಗಳಿಗೆ ಸರ್ಕಾರದ ಸಹಾಯಹಸ್ತ; ಮೆರಗು ತಂದ ಚಂದ್ರಯಾನ-3 ಫಲಪುಷ್ಪ

Mysore dasara

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ದಸರಾ ಸಂಭ್ರಮಕ್ಕೆ ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಹಾಗೂ ಸಿನಿಮೋತ್ಸವ ಮತ್ತಷ್ಟು ಮೆರಗು ಹೆಚ್ಚಿಸಿದೆ.

ಬದುಕಿಗೆ ಮೌಲ್ಯಗಳನ್ನು ನೀಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಮೈಸೂರು ದಸರಾ ಸಿನಿಮೋತ್ಸವವನ್ನು ಉದ್ಘಾಟಿಸಿದ ಅವರು ಗುಣಮಟ್ಟದ ಸಿನಿಮಾಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ. ಜನಪರ ಸಿನಿಮಾ ಮಾಡುವವರಿಗೆ ಸರ್ಕಾರದ ಸಹಾಯಹಸ್ತ ಸದಾ ಇರುತ್ತದೆ ಎಂದರು.

ಹಾಸ್ಯ ನಟ ನರಸಿಂಹರಾಜುಗೆ ನರಸಿಂಹರಾಜುನೇ ಸರಿಸಾಟಿ. ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟರಾಗಿದ್ದರು. ಇವರು ಇಲ್ಲದ ಸಿನಿಮಾ, ಸಿನಿಮಾವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಪ್ರತಿಭೆ ಬೆಳ್ಳಿ ತೆರೆಯಲ್ಲಿ ಬೆಳಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್‌ನಲ್ಲಿ ಲವ್ ಮಾಡಿ ಎಂದು ಹೇಳಿದ್ದೇನೆ ಹೊರತು ಎಣ್ಣೆ ಹೊಡಿರಿ ಎಂದು ಹೇಳಿಲ್ಲ. ಸಿಎಂ ಕೂಡ ಅದೇ ಹೇಳಿದ್ದು ಸಿನಿಮಾದಿಂದ ಒಳ್ಳೆಯದನ್ನಷ್ಟೇ ಕಲಿಬೇಕು ಎಂದರು.

ಸಿಎಂ ಸಿದ್ದರಾಮಯ್ಯರಿಗೆ ಸಚಿವ ಎಚ್‌.ಸಿ ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧೃವನಾರಾಯಣ್, ಹರೀಶ್ ಗೌಡ ಸೇರಿದಂತೆ ಹಲವರು ಸಾಥ್‌ ನೀಡಿದರು. ಜತೆಗೆ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್‌, ಹರ್ಷಿಕ ಪೂನಚ್ಚ, ಮಯೂರಿ, ಸುಧಾ ನರಸಿಂಹರಾಜು ಸೇರಿ ಅನೇಕ ಸಿನಿ ರಂಗದವರು ಭಾಗಿಯಾಗಿದ್ದರು.

ದಸರಾದಲ್ಲಿ ವಿಕ್ರಮ್‌ ಲ್ಯಾಂಡರ್‌ ಹವಾ

ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಸಚಿವ ಎಚ್‌.ಸಿ ಮಹದೇವಪ್ಪ ಉದ್ಘಾಟಿಸಿದರು. ದಸರಾ ಸಂಭ್ರಮಕ್ಕೆ ಚಂದ್ರಯಾನ-3 ಮೆರಗು ತಂದಿತ್ತು. ರಾಕೆಟ್, ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಸೇವಂತಿಗೆ, ಗುಲಾಬಿ ಹೂವುಗಳಲ್ಲಿ ಅರಳಿತ್ತು. ಲಕ್ಷಾಂತರ ಸೇವಂತಿಗೆ ಹೂವುಗಳಿಂದ ಮಾದರಿ ನಿರ್ಮಾಣ ಮಾಡಲಾಗಿತ್ತು. ಕುಪ್ಪಣ್ಣ ಪಾರ್ಕ್‌ನಲ್ಲಿರುವ ಗ್ಲಾಸ್ ಹೌಸ್‌ನಲ್ಲಿ ಹೂವಿನ ಕಲಾಕೃತಿ, ಅಲಂಕಾರ ಎಲ್ಲವೂ ಗಮನಸೆಳೆದವು. ಸುಮಾರು 2.5 ಲಕ್ಷ ಹೂವುಗಳಲ್ಲಿ ಚಂದ್ರಯಾನ 3 ಕಲಾಕೃತಿ ಅರಳಿತ್ತು.

ಗಮನ ಸೆಳೆದ ಆಹಾರ ಮೇಳ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಆಹಾರ ಮೇಳಕ್ಕೆ ಚಾಲನೆನೀಡಿದರು. ಸೌದೆ ಒಲೆಯಲ್ಲಿ ಹಾಲು ಉಕ್ಕಿಸುವ ಮೂಲಕ ಆಹಾರ ಮೇಳವನ್ನು ಉದ್ಘಾಟಿಸಲಾಯಿತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಅಕ್ಕಿಯನ್ನು ಖರೀದಿ ಮಾಡುತ್ತೇವೆ. ಇದೇ ವೇಳೆ ಬಗೆ ಬಗೆಯ ಖಾದ್ಯಗಳನ್ನು ಸವಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version