Site icon Vistara News

Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ

Hamsalekha

ಮೈಸೂರು: ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ಅದ್ಧೂರಿ ದಸರಾವನ್ನು (Mysore Dasara) ಈ ಬಾರಿ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಘೋಷಿಸಿದ್ದಾರೆ. ಮೈಸೂರಿನಲ್ಲಿ ಈ ವಿಷಯವನ್ನು ಪ್ರಕಟಿಸಿದ ಅವರು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್​ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದೆ. ಕಳೆದ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಉದ್ಘಾಟನೆ ಮಾಡಿದ್ದರೆ ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದಿದೆ.

ವೈಭವದ ದಸರಾ ಆಚರಣೆಗೆ ತೀರ್ಮಾನ

ಎಂದಿನಂತೆ ಈ ಬಾರಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ಇರಲಿರುವುದು ವಿಶೇಷ.

ಮೈಸೂರಿನ 119 ವೃತ್ತಗಳು, 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್​ಹೌಸ್ ವೃತ್ತ, ಎಲ್​ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ ನಡೆಯಲಿದೆ. ವಿಜಯ ದಿನದಂದು ಅದ್ಧೂರಿ ಅಂಬಾರಿ ಮೆರವಣಿಗೆ, ಪಂಜಿನ ಕವಾಯತು ನಡೆಯಲಿದೆ.5

500ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ

ಗಂಗರಾಜು ಎಂಬ ಮೂಲ ಹೆಸರಿನ ಹಂಸಲೇಖ ಈಗ ನಾದ ಬ್ರಹ್ಮ ಎಂದೇ ಪ್ರಖ್ಯಾತರು. ಕನ್ನಡದಲ್ಲಿ ಎಂದೂ ಮರೆಯಲಾಗದ ಅಪರೂಪಾದ ಹಾಡುಗಳನ್ನು ನೀಡಿದ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಅವರು. 1951ರ ಜೂನ್‌ 23ರಂದು ಹುಟ್ಟಿದ ಅವರು 1973ರಲ್ಲಿ ತ್ರಿವೇಣಿ ಚಿತ್ರದ “ನೀನಾ ಭಗವಂತ” ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗ ಪ್ರವೇ ಮಾಡಿದರು. ಇವರು ಇದುವರೆಗೆ ಸಂಗೀತ, ಸಾಹಿತ್ಯ ಒದಗಿಸಿರುವ ಚಿತ್ರಗಳು ಐನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಕನ್ನಡ ಪದಗಳನ್ನು ಅದ್ಭುತವಾಗಿ ಬಳಸಿಕೊಂಡು ಸರಳ ಸಾಹಿತ್ಯದೊಂದಿಗೆ ಅದ್ಭುತವಾದ ಹಾಡುಗಳನ್ನು ಬರೆದು ಅಷ್ಟೇ ಸೊಗಸಾದ ಸಂಗೀತ ಅಳವಡಿಸುವುದು ಅವರ ಹೆಚ್ಚುಗಾರಿಕೆ.

ಇದನ್ನೂ ಓದಿ: Mahisha Dasara : ಮೈಸೂರಲ್ಲಿ ಮತ್ತೆ ಮಹಿಷ ದಸರಾ ಎಂದ ಸಚಿವ ಮಹದೇವಪ್ಪ! ಹೊತ್ತಲಿದೆಯೇ ಕಿಡಿ?

Exit mobile version