ಮೈಸೂರು: ಹೊಂಡ ಮತ್ತು ಗುಂಡಿಗಳಿಂದ ಹದಗೆಟ್ಟು ಅಧ್ವಾನವಾದ ರಸ್ತೆಯಿಂದ ವಾಹನ ಸವಾರರು ದಿನನಿತ್ಯ ಪರದಾಡುವುದನ್ನು ಅರಿತು, ಸಾರ್ವಜನಿಕರ ಹಿತದೃಷ್ಟಿಯಿಂದ ತಾವೇ ಖುದ್ದಾಗಿ ಹಣ ವ್ಯಯಿಸಿ, ಹಾಳಾದ ರಸ್ತೆಯ ದುರಸ್ತಿಗೆ (Mysore News) ಕ್ರಮ ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ವರ್ಷಾ ಬಿ.ವಿ.
ಹೌದು, ಮಂಡ್ಯದ ಹೊಳಲು ವೃತ್ತದ ಬಳಿ ಪ್ರತಿನಿತ್ಯ ವಾಹನ ಸವಾರರು ತೊಂದರೆ ಅನುಭವಿಸುವುದನ್ನು ಕಂಡ ಪಿಎಸ್‌ಐ ವರ್ಷಾ ಅವರು ಈ ಸಮಸ್ಯೆಗೆ ತಾವೇ ಏನಾದರೂ ಸಹಾಯ ಮಾಡಲು ನಿರ್ಧರಿಸಿ, ಸ್ವಂತ ಹಣದಿಂದ ಹಾಗೂ ಸ್ವತಃ ಮೇಲ್ವಿಚಾರಣೆ ಮಾಡುವ ಮೂಲಕ ರಸ್ತೆ ದುರಸ್ತಿ ಕೈಗೊಂಡಿರುವುದು ಜನರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: Lok Sabha Election: 5ನೇ ಹಂತದಲ್ಲಿ ಕೇವಲ ಶೇ.56ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?
ರಸ್ತೆ ದುರಸ್ತಿಗಾಗಿ ಟಿಪ್ಪರ್ ಅನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಣ್ಣು ಸಾಗಿಸಿ ಒಂದು ದಿನ ಕಾರ್ಮಿಕರನ್ನು ಕರೆಸಿ ಗುಂಡಿಗಳನ್ನು ಮಣ್ಣಿನಿಂದ ತುಂಬಿಸಲು ವ್ಯವಸ್ಥೆ ಮಾಡಿದ್ದಾರೆ, ಇದರಿಂದ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಇಂದು ಭಯವಿಲ್ಲದೆ ಸಂಚರಿಸುವಂತಾಗಿದೆ. ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಲು ಸಾಕಷ್ಟು ವೆಚ್ಚ ತಗುಲಿತ್ತು. ಆದರೆ ಇದನ್ನು ಅವರ ಸ್ವಂತ ಹಣದಲ್ಲಿ ಭರಿಸಿದ್ದಾರೆ. ಈ ಕಾರ್ಯಕ್ಕೆ ಸುತ್ತಮುತ್ತಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಿಎಸ್‌ಐ ವರ್ಷಾ ಅವರು, ರಸ್ತೆಯಲ್ಲಿ ಹೊಂಡ-ಗುಂಡಿಗಳಿಂದ ಪ್ರತಿದಿನ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ನನ್ನ ಕರ್ತವ್ಯ ಎಂದು ಭಾವಿಸಿ ಈ ಕಾರ್ಯ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ನನ್ನ ಕೆಲಸವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಆಸುಪಾಸಿನಲ್ಲಿ ಇಂತಹ ತಗ್ಗು-ಗುಂಡಿಗಳು ಹೆಚ್ಚಾಗಿದ್ದು, ನನ್ನಿಂದ ಸಾಧ್ಯವಾಗುವ ಮಟ್ಟಿಗೆ ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಪಿಎಸ್‌ಐ ವರ್ಷಾ ಬಿ.ವಿ. ಹೇಳಿದ್ದಾರೆ.
ಈ ರಸ್ತೆಯಲ್ಲಿ ಹೊಂಡ ಬಿದ್ದು ಹಳ್ಳದಂತಾಗಿತ್ತು. ಕಳೆದ ವಾರ ಸುರಿದ ಭಾರೀ ಮಳೆಗೆ ಅದು ಸಣ್ಣ ಕೊಳದಂತೆ ಕಾಣುತ್ತಿತ್ತು. ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಗಿತ್ತು. ಪೊಲೀಸ್ ಅಧಿಕಾರಿ ವರ್ಷಾ ಅವರ ಈ ಕಾರ್ಯದಿಂದ ಇಂದು ಬಹಳ ಸಹಾಯವಾಗಿದೆ ಎಂದು ಸ್ಥಳೀಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಪಿಎಸ್‌ಐ ವರ್ಷಾ ಬಿ.ವಿ. ಅವರ ಈ ಸಮಾಜ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ