ಮೈಸೂರು: ಅಧ್ಯಯನದಲ್ಲಿ ಆನಂದ ಕಾಣುವವರು ಮಾತ್ರ ಉನ್ನತ ಮಟ್ಟದ ಜ್ಞಾನಾರ್ಜನೆ ಮಾಡಲು ಸಾಧ್ಯ ಎಂದು ಶ್ರೀ ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ (Mysore News) ತಿಳಿಸಿದರು.
ಸೋಸಲೆ ಶ್ರೀ ವ್ಯಾಸರಾಜ ಮಹಾ ಸಂಸ್ಥಾನ ಮತ್ತು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲಿ ಗುರುವಾರ ಆಯೋಜಿಸಿದ್ದ ವಿದ್ವತ್ ಸಭೆಯ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಕಲಿಕೆ ವಿಷಯದಲ್ಲಿ ವಿದ್ಯಾರ್ಥಿಗಳು ಎಂದೂ ತೃಪ್ತರಾಗಬಾರದು. ವಿವಿಧ ಗ್ರಂಥಗಳ ಅಧ್ಯಯನ, ಅವಲೋಕನ, ಪರಾಮರ್ಶನ ಮತ್ತು ಚಿಂತನೆಗಳಿಂದ ಜ್ಞಾನವನ್ನು ವಿಸ್ತಾರ ಮಾಡಿಕೊಳ್ಳುತ್ತಿರಬೇಕು. ಕೇವಲ ಪರೀಕ್ಷೆಗಾಗಿ ಓದುವುದು ಒಂದು ಹಂತದ ಸಾಧನೆ. ಆದರೆ ಸುಧಾ ಸೇರಿ ಆಚಾರ್ಯ ಮಧ್ವರ ಗ್ರಂಥಗಳ ಅಧ್ಯಯನ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಚಾರ್ಯ ಮಧ್ವರು ನೀಡಿದ ಪ್ರತಿಯೊಂದು ಸಂದೇಶವೂ ಎಲ್ಲ ದೇಶ ಕಾಲಕ್ಕೆ ದಿಕ್ಸೂಚಿಯಾಗಿವೆ ಎಂದರು.
ಇದನ್ನೂ ಓದಿ: Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ
ಮಧ್ವರ ಮಹೋನ್ನತ ಕೃತಿಗಳ ಸಾರಸಂಗ್ರಹವಾದ ಶ್ರೀಮನ್ ನ್ಯಾಯ ಸುಧಾ ಮತ್ತು ಶ್ರೀ ವ್ಯಾಸತೀರ್ಥರ ತತ್ವ ಚಂದ್ರಿಕಾ ಗ್ರಂಥಗಳ ಅಧ್ಯಯನವು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದರು.
ಸೋಸಲೆ ಶ್ರೀ ವಿದ್ಯಾ ಶ್ರೀಶ ತೀರ್ಥ ಸ್ವಾಮೀಜಿಯವರು ಜ್ಞಾನ ಪ್ರಸರಣ ಮತ್ತು ಶಾಸ್ತ್ರ ವಿದ್ಯೆ ಕಲಿಕೆ ನಿಟ್ಟಿನಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ನೂರಾರು ಜನರಿಗೆ ಪಾಠ ಹೇಳಿರುವ ಅವರು ಈ ಬಾರಿ ನಾಲ್ಕು ವಿದ್ಯಾರ್ಥಿಗಳನ್ನು ಸುಧಾ ಪಂಡಿತರನ್ನಾಗಿಸಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುವಲ್ಲಿ ಅಹರ್ನಿಶಿ ಶ್ರಮಿಸಿರುವುದು ಶ್ಲಾಘನೀಯ ಎಂದು ಶ್ರೀಗಳು ತಿಳಿಸಿದರು.
ಎತ್ತರಕ್ಕೆ ಬೆಳೆಯಿರಿ
ಬೆಂಗಳೂರಿನ ಭುವನಗಿರಿ ಆಶ್ರಮದ ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದ್ರದಷ್ಟು ಆಳಕ್ಕೆ ಪರ್ವತದಷ್ಟು ಎತ್ತರಕ್ಕೆ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಕೀರ್ತಿ ಬೆಳಗಲಿ ಎಂದು ಹೇಳಿದರು.
ಇದನ್ನೂ ಓದಿ: Uttara Kannada News: ಉ.ಕ ಜಿಲ್ಲೆ ಬಿಜೆಪಿಯ ಗಟ್ಟಿನೆಲ ಎಂಬುದು ಮತ್ತೊಮ್ಮೆ ಸಾಬೀತು: ಹರಿಪ್ರಕಾಶ್ ಕೋಣೆಮನೆ
ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಜ್ಞಾನಕ್ಕೆ ಸಮನಾದದು ಜಗತ್ತಿನಲ್ಲಿ ಯಾವುದೂ ಇಲ್ಲ . ಹಾಗಾಗಿ ವಿದ್ವತ್ತನ್ನು ಪಡೆಯಲು ಶ್ರಮ ಹಾಕಿದರೆ ಭವಿಷ್ಯದಲ್ಲಿ ಸುಖ ಸಂಪತ್ತು ಅರಸಿ ಬರುತ್ತವೆ ಎಂದರು.
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ವಿದ್ಯಾರ್ಥಿಗಳ ಶಾಸ್ತ್ರ ಜ್ಞಾನ ಪರೀಕ್ಷೆ ಮಾಡಿದರು.
ಪ್ರಣವ ಆಚಾರ್ಯರಿಂದ ಸಮರ್ಥ ಉತ್ತರ
ವಿದ್ಯಾರ್ಥಿ ಪ್ರಣವ ಆಚಾರ್ಯ ಅವರು ಶ್ರೀಮನ್ ನ್ಯಾಯ ಸುಧಾ ತಾತ್ಪರ್ಯ ಚಂದ್ರಿಕಾ ಮತ್ತು ನ್ಯಾಯಾಮೃತ ಗ್ರಂಥಗಳ ಮೇಲಿನ ಪ್ರಶ್ನೆಗಳಿಗೆ ಸಮರ್ಥ ಉತ್ತರವನ್ನು ನೀಡಿ ಗಮನ ಸೆಳೆದರು.
ಇದನ್ನೂ ಓದಿ: World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ
ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಹರಿದಾಸ ಭಟ್, ಮುಂಬೈ ವಿದ್ಯಾಪೀಠದ ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯ, ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ರಂಗಾಚಾರ್ಯ, ಪ್ರಾಚಾರ್ಯ ವಿದ್ಯಾಧೀಶ ಆಚಾರ್ಯ ಗುತ್ತಲ, ಪಂಡಿತ ಪ್ರಹ್ಲಾದಾಚಾರ್ಯ, ಮಾತರಿಶ್ವಾಚಾರ್ಯ, ಡಿ.ಪಿ. ಅನಂತಾಚಾರ್ಯ, ಡಿ.ಪಿ. ಮಧುಸೂದನಾಚಾರ್ಯ. ಡಾ. ಶ್ರೀನಿಧಿ ಪ್ಯಾಟಿ ಇದ್ದರು.