ಮೈಸೂರು: ಇದು ಎಲ್ಲರೂ ಎಚ್ಚರ ವಹಿಸಬೇಕಾದ ಸುದ್ದಿ. ಆಸ್ತಿ ಖರೀದಿಗೆ ಮುನ್ನ ದಾಖಲೆಗಳನ್ನು (Mysore Scam) ಸರಿಯಾಗಿ ಪರಿಶೀಲನೆ ಮಾಡಿಯೇ ಮುಂದಾಗಬೇಕು. ಸ್ವಲ್ಪ ಯಾಮಾರಿದರೂ ಇಂತಹ ಯಾಮಾರಿಸುವವರ ಬಳಿ ವಂಚನೆಗೆ ಒಳಗಾಗಬೇಕಾಗುತ್ತದೆ. ಈಗ ಆಸ್ತಿಗಳ ಪರಭಾರೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಸೆರೆ ಹಿಡಿಯುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಗ್ಯಾಂಗ್ ಬಳಿ ಅಧಿಕಾರಿಗಳ ನಕಲಿ ಸೀಲ್, ಸಹಿ ಎಲ್ಲವೂ ಇದೆ. ಅಲ್ಲದೆ, ಅಪಾರ ಪ್ರಮಾಣದ ನಕಲಿ ದಾಖಲಾತಿಗಳನ್ನೂ ಇಟ್ಟುಕೊಂಡಿರುವ ಇವರು, ಬಹಳ ಸುಲಭವಾಗಿ ಮಂದಿಯನ್ನು ಯಾಮಾರಿಸುತ್ತಿದ್ದರು ಎನ್ನಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಗಳ ಪರಭಾರೆ ಮಾಡುವುದೇ ಇವರ ಕಾಯಕವಾಗಿತ್ತು. ಈ ಸಂಬಂಧ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಭಾರೀ ವಂಚಕರ ಜಾಲ ಬಯಲು
ಮುಡಾ, ಮಹಾನಗರ ಪಾಲಿಕೆ ಸೇರಿ ಸರ್ಕಾರಿ ದಾಖಲಾತಿಗಳನ್ನು ಸ್ವಲ್ಪವೂ ಅನುಮಾನ ಬರದಂತೆ ಇವರು ಸಿದ್ಧಪಡಿಸುತ್ತಿದ್ದರು. ಯಾರದ್ದೋ ಆಸ್ತಿಯನ್ನು ಮತ್ಯಾರಿಗೋ ಮಾರಾಟ ಮಾಡುತ್ತಿದ್ದರು. ಖರೀದಿ ಮಾಡಿ ಅದರ ಸ್ವಾಮ್ಯವನ್ನು ಪಡೆಯುಲು ಹೋದಾಗಲೇ ಮೋಸಕ್ಕೆ ಒಳಗಾಗಿರುವುದು ಬೆಳಕಿಗೆ ಬರುತ್ತಿತ್ತು.
ಇವರು ಮೊದಲು ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳಿಗೆ ನಕಲಿ ಮಾಲೀಕರನ್ನು ಸೃಷ್ಟಿಸುತ್ತಿದ್ದರು. ಇದಕ್ಕೆ ಬ್ಯಾಂಕ್‍ನಲ್ಲಿ ಸಹ ಸಾಲ ಪಡೆಯುತ್ತಿದ್ದರು. ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳ ಸೀಲ್‍ಗಳನ್ನು ಇದಕ್ಕಾಗಿಯೇ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನವರಿಗೂ ಯಾವುದೇ ಅನುಮಾನ ಬರುತ್ತಿರಲಿಲ್ಲ. ನಕಲಿ ಇ-ಸ್ಟ್ಯಾಂಪ್ ಪೇಪರ್‌ಗಳು, ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ ಮೊಬೈಲ್‍ಗಳನ್ನು ಸಹ ಇವರು ಹೊಂದಿದ್ದರು. ಎಲ್ಲವನ್ನೂ ಪಕ್ಕಾ ವ್ಯವಸ್ಥಿತವಾಗಿಯೇ ಮಾಡುತ್ತಿದ್ದರು.
ಇದನ್ನೂ ಓದಿ | ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
ಶಾಸಕರೊಬ್ಬರ ತಂದೆ ಹೆಸರಲ್ಲೇ ವಂಚನೆಗೆ ಯತ್ನ!
ಈ ವಂಚಕರು ಶಾಸಕರೊಬ್ಬರ ತಂದೆಯ ಆಸ್ತಿಗೇ ನಕಲಿ ಮಾಲೀಕನನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಮೈಸೂರಿನ ಯಾದವಗಿರಿಯಲ್ಲಿರುವ 80×100 ಅಳತೆಯ ಮುಡಾಗೆ ಸೇರಿದ ನಿವೇಶನದ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯಲು ಪ್ರಯತ್ನಿಸಿದ್ದರು.
ಎರಡು ವರ್ಷಗಳ ಹಿಂದೆ ಈ ಕುರಿತು ಮುಡಾ ಆಯುಕ್ತರು ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಬೆಂಗಳೂರು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆಯ ಆಸ್ತಿಗೆ ಸಂಬಂಧಿಸಿದ ಪ್ರಕರಣ ಇದಾಗಿತ್ತು. ತಾಲೂಕು ಕಚೇರಿಯಲ್ಲಿ ಆರ್‌ಟಿಸಿ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾದವಗಿರಿಯ ಮುಡಾ ನಿವೇಶನದ ಪ್ರಕರಣ ಸಂಬಂಧ ಬ್ಯಾಂಕ್‍ನ ಕಾನೂನು ಸಲಹೆಗಾರರು ದಾಖಲೆ ಪತ್ರಗಳನ್ನು ಪರಿಶೀಲಿಸಿದ ವೇಳೆ ವಿಚಾರ ತಿಳಿದಿದೆ.
ಪದೇಪದೆ ಮೊಬೈಲ್ ಬದಲಿಸುತ್ತಿದ್ದ ಕಿಂಗ್‌ಪಿನ್
ವಂಚನೆ ಜಾಲ ಇರುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಲಕ್ಷ್ಮೀಪುರಂ ಮತ್ತು ಮೇಟಗಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಒಬ್ಬನೇ ಕಿಂಗ್‍ಪಿನ್ ಇರುವುದು ಸಹ ಗೊತ್ತಾಗಿದೆ. ಹೀಗಾಗಿ ಮೈಸೂರು ನಗರ ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದರು. ಈ ವ್ಯಕ್ತಿ ಪದೇಪದೆ ಮೊಬೈಲ್‍ಗಳನ್ನು ಬದಲಾವಣೆ ಮಾಡುತ್ತಿದ್ದರಿಂದ ಆತನ ಸುಳಿವು ಸಹ ಸಿಗುತ್ತಿರಲಿಲ್ಲ.
ಕೊನೆಗೆ ಆತ ಮೈಸೂರಿನ ರಾಮಕೃಷ್ಣನಗರ ವಿಶ್ವಮಾನವ ಜೋಡಿರಸ್ತೆ, ಗೋಲ್ಡನ್ ಬೆಲ್ಸ್ ಸರ್ವಿಸ್ ಅಪಾರ್ಟ್‍ಮೆಂಟ್‍ನ ಕೊಠಡಿ ಸಂಖ್ಯೆ 301ರಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಕಿಂಗ್‍ಪಿನ್ ಸಹಿತ ಮೂವರನ್ನು ಬಂಧಿಸಲಾಗಿದೆ. ಡಿಸಿಪಿ ಪ್ರದೀಪ್‍ಗುಂಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಇನ್ನಷ್ಟು ವಂಚನೆ ಪ್ರಕರಣ ಬೆಳಕಿಗೆ ಬರಬೇಕಿದೆ
ಈ ವಂಚಕರ ಜಾಲವು ಇದೇ ರೀತಿ ಇನ್ನೂ ಬಹಳಷ್ಟು ಮಂದಿಗೆ ವಂಚನೆ ಮಾಡಿರುವ ಶಂಕೆ ಇದ್ದು, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯಾರದ್ದೋ ಆಸ್ತಿಯನ್ನು ಖರೀದಿ ಮಾಡಿರುವ ಅಮಾಯಕರು ಇನ್ನಷ್ಟು ಮಂದಿ ಇರಬಹುದು ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ದಾಖಲೆಗಳನ್ನು ಪರಿಶೀಲನೆ ಮಾಡದೇ ಖರೀದಿ ಮಾಡಿರುವವರ ಬಗ್ಗೆ ಆರೋಪಿಗಳ ಬಳಿ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಈ ಜಾಲ ಮೈಸೂರಿಗೆ ಮಾತ್ರ ಸೀಮಿತವಾಗಿತ್ತೇ? ಬೆಂಗಳೂರಿಗೂ ವಿಸ್ತರಿಸಿದೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಸಾಯಿಬಾಬಾನ 3ನೇ ಅವತಾರ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ನಕಲಿ ಬಾಬಾ ಪರಾರಿ!