-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಳೆದ ವಾರದ ಕೊನೆಯಲ್ಲಿ ಬಲ್ಗೆರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಯೂನಿವರ್ಸ್ ಪೇಜೆಂಟ್‌ನಲ್ಲಿ ಆಯೋಜಕರು ಸ್ಪರ್ಧಿಗಳಿಂದ ಹಣ ಪಡೆದು ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಇತರೇ ಅರ್ಹ ಸ್ಪರ್ಧಿಗಳನ್ನು ಕಡೆಗಣಿಸಿ, ವಂಚಿಸಿದ್ದಾರೆ ಎಂದು ವಿವಾಹಿತರಿಗೆಂದು ನಡೆದ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮೈಸೂರಿನ ಅಪೂರ್ವ ರೈ (Allegation) ನೇರವಾಗಿ ಆರೋಪಿಸಿದ್ದಾರೆ.
ಈ ಕುರಿತಂತೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಕಳೆದ ಒಂದು ವರ್ಷಗಳ ಕಾಲ ಈ ಪೇಜೆಂಟ್‌ಗಾಗಿ ಪ್ರೊಫೆಷನ್ ಹಾಗೂ ಫ್ಯಾಮಿಲಿ ಎಲ್ಲವನ್ನು ಬದಿಗಿಟ್ಟು, ಗ್ರೂಮಿಂಗ್, ಮೇಕ್‌ಓವರ್ ಎಂದೆಲ್ಲಾ ಕಷ್ಟಪಟ್ಟು ಸಿದ್ಧತೆ ನಡೆಸಿ , ಆತ್ಮವಿಶ್ವಾಸದಿಂದ ಮುನ್ನೆಡೆದರೂ, ಕೊನೆಯ ಕ್ಷಣಗಳಲ್ಲಿ ಅರ್ಹತೆಯಿಲ್ಲದ ಸ್ಪರ್ಧಾಳುಗಳನ್ನು ಹಣ ಪಡೆದು ಆಯ್ಕೆ ಮಾಡಿರುವುದು ತಮಗೆ ಬೇಸರ ಮೂಡಿಸಿದೆʼʼ ಎಂದು ಪೇಜೆಂಟ್ ವಿರುದ್ಧ ನಾನಾ ಆರೋಪದ ಸುರಿಮಳೆಯನ್ನೇಗೈದಿದ್ದಾರೆ.
ಲಕ್ಷಾಂತರ ರೂ. ಖರ್ಚು
ಪೇಜೆಂಟ್‌ನಲ್ಲಿ ರಿಜಿಸ್ಟರ್‌ಗಾಗಿ ಲಕ್ಷಾನುಗಟ್ಟಲೇ ಶುಲ್ಕ ವೆಚ್ಚ ಮಾಡಿ ಗ್ರೂಮಿಂಗ್, ಮೇಕ್‌ಓವರ್, ಡಿಸೈನರ್‌ವೇರ್ ಎಂದೆಲ್ಲಾ ದಶ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು, ವಿಜೇತಳಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ, ಅಲ್ಲಿ ಕೊನೆಯ ದಿನ ನಡೆದ ಸನ್ನಿವೇಶವೇ ಬೇರೆಯಾಗಿತ್ತು. ಭಾರತೀಯಳಾಗಿ ಮಿಸೆಸ್ ಯೂನಿವರ್ಸ್ ಬೆಸ್ಟ್ ಬಾಡಿ, ಮಿಸೆಸ್ ಯೂನಿವರ್ಸ್ ಟಾಪ್ ಏಷಿಯಾದಂತಹ ಸಬ್ ಟೈಟಲ್‌ಗಳನ್ನು ಪಡೆದು ಅರ್ಹತೆ ಸುತ್ತಿಗೆ ಎಂಟ್ರಿ ಪಡೆದರೂ, ಅಚ್ಚರಿ ಎಂಬಂತೆ, ಕೊನೆಯ ಕ್ಷಣಗಳಲ್ಲಿ ಅರ್ಹತೆ ಹೊಂದಿಲ್ಲದವರಿಗೆ ಟಾಪ್ ಸ್ಥಾನ ನೀಡಿ, ವಿಜೇತರನ್ನಾಗಿ ಅನೌನ್ಸ್ ಮಾಡಲಾಯಿತು. ಇದನ್ನು ಮನಗಂಡ ಒಂದಿಷ್ಟು ಸ್ಪರ್ಧಿಗಳು ವಿರುದ್ಧ ದನಿ ಎತ್ತಿದರೂ ಆಯೋಜಕರು ತಲೆಕೆಡಿಸಿಕೊಳ್ಳಲಿಲ್ಲ! ಹಾಗಾಗಿ ತಾಯ್ನಾಡಿಗೆ ಮರಳಿ ಬಂದ ನಂತರ, ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡುತ್ತಿದ್ದೇನೆ ಹಾಗೂ ಸಬ್ ಟೈಟಲ್ ಹಿಂತಿರುಗಿಸುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Ramp News: ಶೈನ್ ಟ್ಯಾಗ್‌ನ 3ನೇ ಸೀಸನ್ ಫ್ಯಾಷನ್ ಶೋನಲ್ಲಿ ನಯಾ ಡಿಸೈನರ್ ವೇರ್ಸ್ ಪ್ರದರ್ಶನ
ನ್ಯಾಷನಲ್ ಡೈರೆಕ್ಟರ್‌ಗಳ ಕೈವಾಡ
ʻʻಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ನ್ಯಾಷನಲ್ ಡೈರೆಕ್ಟರ್‌ಗಳ ಕೈವಾಡ ಕೂಡ ಇದೆ. ಮೊದಲೇ ನ್ಯಾಷನಲ್ ಡೈರೆಕ್ಟರ್‌ಗಳು ಬುಕ್ ಮಾಡಿರುವುದರಿಂದ ಕೆಲವರು ಮೊದಲೆ ಅಲ್ಲಿಗೆ ಹೋಗಿದ್ದರು. ಇಲ್ಲಿ ಪ್ರತಿಭೆಗೆ ಯಾವುದೇ ಅವಕಾಶ ಇಲ್ಲ ಕೇವಲ ಹಣ ಮಾತ್ರ. ಇದು ನನಗೆ ತುಂಬ ನೋವು ತಂದಿಂದೆ, ನನ್ನಂತೆ ಯಾರು ಕೂಡ ಮೋಸ ಹೋಗಬಾರದು ಎಂದುʼʼ ಅಪೂರ್ವ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಥೋಮಾ ಕ್ರಿಯೇಷನ್ ಮುಖಾಂತರ ಇವೆಂಟ್‌ನಲ್ಲಿ ಅಪೂರ್ವ ರೈ ಭಾಗಿ ಆಗಿದ್ದರು.
ಜಾಗೃತಿ ಮೂಡುವುದು ಅಗತ್ಯ
ಇನ್ನು ಮುಂದೆ ಈ ರೀತಿಯ ಪೇಜೆಂಟ್‌ಗಳಲ್ಲಿ ಭಾಗವಹಿಸುವವರು ಮೊದಲೇ ಕೂಲಂಕಶವಾಗಿ ಪೇಜೆಂಟ್‌ನ ಎಲ್ಲ ವಿವರಗಳನ್ನು ತಿಳಿದುಕೊಂಡು ಭಾಗವಹಿಸುವುದು ಅವಶ್ಯ. ಇಲ್ಲವಾದಲ್ಲಿ ಸುಖಾಸುಮ್ಮನೆ ದೊಡ್ಡ ಮೊತ್ತದ ಹಣ ಕಳೆದುಕೊಳ್ಳಬೇಕಾಗುತ್ತದೆ. ನಾನು ಇಲ್ಲಿಯವರೆಗೂ ಯಾವುದೇ ಕಾನೂನಿನ ಸಹಾಯ ತೆಗೆದುಕೊಂಡಿಲ್ಲ. ಹಾಗೆಂದು ಎಲ್ಲಾ ಪೇಜೆಂಟ್‌ಗಳು ಹೀಗೆಯೇ ಇರುತ್ತವೆ ಎಂಬುದಲ್ಲ. ಈ ಕ್ಷೇತ್ರದಲ್ಲಿ ಮುಂದುವರೆಯಲು ಬಯಸುವ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ನನ್ನದಾಗಿದೆ ಎಂದು ಅಪೂರ್ವ ರೈ ಹೇಳಿದರು.
ಇದನ್ನೂ ಓದಿ: Cow Slaughter : ಹುಬ್ಬಳ್ಳಿ ಕಸಾಯಿ ಖಾನೆಗಳಲ್ಲಿ ಗೋವುಗಳ ಮಾರಣಹೋಮ ಆರೋಪ; ಕಾನೂನು ಕ್ರಮಕ್ಕೆ ಬಜರಂಗ ದಳ ಆಗ್ರಹ
ಅಪೂರ್ವ ರೈ ಹಿನ್ನೆಲೆ ಏನು?
ಫೆಮೀನಾ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಅಪೂರ್ವ ರೈ ಮೈಸೂರಿನ ನಿವಾಸಿ.ವಾಸ್ತವವಾಗಿ ಅಪೂರ್ವ ರೈ ಒಬ್ಬ ವ್ಯಾಪಾರ ಮಹಿಳೆ ಮತ್ತು ವೃತ್ತಿಪರ ರೂಪದರ್ಶಿ. 2022 ರಲ್ಲಿ, ಅವರು ಮಿಸೆಸ್ ಸೌತ್ ಪೆಸಿಫಿಕ್ ಏಷ್ಯಾ ಯೂನಿವರ್ಸ್ 2022 (south Pacific Asia Universe 2022) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯನ್ನು ಗೆದ್ದ ನಂತರ, ಅಪೂರ್ವ ರೈ ಅವರು ಮಾಧ್ಯಮದ ಸಂದರ್ಶನದಲ್ಲಿ ತಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಸದ್ಯ ಅವರಿಗೆ 3 ವರ್ಷದ ಮಗನಿದ್ದಾನೆ. ಅಪೂರ್ವ ರೈ ತಮ್ಮದೇ ಆದ ಸ್ಕ್ರೀನ್ ಕೇರ್ ಕಾಸ್ಮೆಟಲಾಜಿಕಲ್ ಕ್ಲಿನಿಕ್ ಅನ್ನು ಹೊಂದಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)