Site icon Vistara News

Basava Jayanti : ಸಿದ್ದರಾಮಯ್ಯ ಶರಣ ಸಂಸ್ಕೃತಿ ಸಾಕಾರ ರೂಪ; ಹಾಡಿ ಹೊಗಳಿದ ಮಹದೇವಪ್ಪ, ಖಂಡ್ರೆ

Basava Jayanti Siddaramaiah

ಮೈಸೂರು: ಸಿದ್ದರಾಮಯ್ಯ (CM Siddaramaiah) ಅವರು ದಾಸೋಹ ಸಂಸ್ಕಾರದ ಸಾಕಾರ, ಸರ್ವರ ಮುಖ್ಯಮಂತ್ರಿ ಎಂದು ಸಚಿವ ಎಚ್.ಸಿ. ಮಹದೇವಪ್ಪ (HC Mahadevappa) ಹೇಳಿದರೆ, ಸಿದ್ದರಾಮಯ್ಯ ಅವರು ಬಸವತತ್ವದ ಅಪ್ಪಟ ಅನುಯಾಯಿ. ಸರ್ವರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಶ್ಲಾಘಿಸಿದರು ಸಚಿವ ಈಶ್ವರ ಖಂಡ್ರೆ (Eshwar Khandre). ಇವರು ಏಕಕಂಠದಿಂದ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದು ಮೈಸೂರಿನಲ್ಲಿ ನಡೆದ ಬಸವ ಜಯಂತಿ (Basava Jayanti) ಕಾರ್ಯಕ್ರಮದಲ್ಲಿ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಬಸವ ಬಳಗಗಳ ಒಕ್ಕೂಟ ಮೈಸೂರು ಕಲಾಮಂದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಸಿದ್ದರಾಮಯ್ಯ ಬಸವತತ್ವದ ಅಪ್ಪಟ ಅನುಯಾಯಿ. ಸರ್ವರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ ಎಂದರು.

ಎಲ್ಲಾ ಜಾತಿ-ಧರ್ಮ- ಸಮುದಾಯಗಳಿಗೆ ಅಕ್ಷರ ಮತ್ತು ಅನ್ನ ದಾಸೋಹವನ್ನು ನೀಡಿದ್ದು ಲಿಂಗಾಯತ ವೀರಶೈವ ಮಠಗಳು. ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಕಾರ್ಯಕ್ರಮಗಳು ಕೂಡ ಶರಣರ ಆಶಯದಂತೆ ಎಲ್ಲಾ ಜಾತಿ, ಧರ್ಮಗಳಿಗೂ ಅನ್ವಯವಾಗುತ್ತವೆ ಎಂದು ವಿವರಿಸಿದರು.

Basava jayanti programme at Mysore

ದಾಸೋಹ ಸಂಸ್ಕಾರದ ಸಿದ್ದರಾಮಯ್ಯ ಎಂದ ಎಚ್.ಸಿ.ಮಹದೇವಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣ ಸಂಸ್ಕೃತಿಯನ್ನು ತಮ್ಮ ಬದುಕಿನ ಆಚರಣೆಯನ್ನಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಬಸವ ಜಯಂತಿಯ ದಿನವನ್ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ಕೆ ಮಾಡಿಕೊಂಡರು ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ನುಡಿದರು.

ಶರಣ ಸಂಸ್ಕೃತಿಯ ಅನುಯಾಯಿಗಳಾದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾದ ಬಳಿಕ ಮೊದಲಿಗೆ ಸಹಿ ಹಾಕಿದ್ದು ದಾಸೋಹ ಸಂಸ್ಕೃತಿಯ ಅನ್ನ ಭಾಗ್ಯ ಯೋಜನೆಗೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಕಡ್ಡಾಯಗೊಳಿಸಿದ್ದು ಸಿದ್ದರಾಮಯ್ಯ ಅವರು. ಹೀಗಾಗಿ ವಚನ ಕ್ರಾಂತಿ ಮತ್ತು ಶರಣ ಸಂಸ್ಕೃತಿಯ ಆಶಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದುಕು ಮತ್ತು ಆಚರಣೆಗಳಲ್ಲಿ ಇದೆ ಎಂದು ಹೆಚ್.ಸಿ.ಮಹದೇವಪ್ಪ ಅವರು ವಿವರಿಸಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಮತ್ತು ಪರಿಸರ ಸಚಿವ ಬಿ.ಈಶ್ವರ ಖಂಡ್ರೆ ಅವರು ವಹಿಸಿದ್ದರು.

ಇದನ್ನೂ ಓದಿ: CM Siddaramaiah : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಜಾರಿ ಬಗ್ಗೆ ಮುಂದೆ ನಿರ್ಧಾರ ಎಂದ ಸಿಎಂ

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು “12ನೇ ಶತಮಾನದ ಶರಣ ದಂಪತಿಗಳು” ಕೃತಿಯನ್ನು ಬಿಡುಗಡೆ ಮಾಡಿದರು. ಬಸವೇಶ್ವರ ಪುತ್ಥಳಿ ದಾನ ಮಾಡಿದ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ, ಶಾಸಕರುಗಳಾದ ಮಾಜಿ ಸಚಿವ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಜಿ.ಡಿ.ಹರೀಶ್ ಗೌಡ, ಎಚ್.ಎಂ.ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ.ತಿಮ್ಮಯ್ಯ ಸೇರಿ ಮಾಜಿ ಶಾಸಕರು ಹಾಗೂ ನಾಯಕರುಗಳು ಉಪಸ್ಥಿತರಿದ್ದರು.

Exit mobile version