Site icon Vistara News

Cauvery Dispute : ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ KRS ಮಟ್ಟ; ಹೀಗೇ ಆದ್ರೆ ಡ್ಯಾಂ ಫುಲ್‌ ಖಾಲಿ

Water beind released from KRS Dam

ಮೈಸೂರು: ಕಾವೇರಿ ನದಿ ನೀರು ಪ್ರಾಧಿಕಾರದ (Cauvery water Management authority) ಆದೇಶದಂತೆ ರಾಜ್ಯ ಸರ್ಕಾರ ಬುಧವಾರದಿಂದಲೇ ಪ್ರತಿದಿನ 5000 ಕ್ಯೂಸೆಕ್‌ ನೀರು ಬಿಡಲು (5000 Cusec water release) ಆರಂಭಿಸಿದೆ. ಇದರ ವಿರುದ್ಧ ರೈತಾಕ್ರೋಶ ಭುಗಿಲೆದ್ದಿದೆ. ಮಂಡ್ಯ ಜಿಲ್ಲೆಯ ಹಲವು ಕಡೆಗಳಲ್ಲಿ ರೈತರು ಬೀದಿಗೆ ಇಳಿದಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ದೊಡ್ಡ ಪ್ರಮಾಣ ಪ್ರತಿಭಟನೆ ನಡೆಯುತ್ತಿದೆ. ಇದರ ಮಧ್ಯೆಯೇ ಮಂಡ್ಯದ ಕೆ.ಆರ್‌ಎಸ್‌ನಲ್ಲಿರುವ ಕೆಆರ್‌ಎಸ್‌ ಡ್ಯಾಂನ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ (Diminishing water level in KRS) ಕಾರಣವಾಗಿದೆ.

ಕೆ.ಆರ್‌.ಎಸ್‌ನ ಗರಿಷ್ಠ ಮಟ್ಟ 124 ಅಡಿಯಾಗಿದ್ದು, ಈಗ ಅದು 100 ಅಡಿಗೆ ಇಳಿದಿದೆ. ತಮಿಳುನಾಡಿಗೆ ಕೆ.ಆರ್.ಎಸ್.ನಿಂದ ನೀರು ಬಿಡುಗಡೆ ಮಾಡಿದ ದಿನದಿಂದ ದಿನೇದಿನೆ ನೀರಿನ ಮಟ್ಟ ಕುಸಿಯುತ್ತಿದೆ. ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. (ಗುರುವಾರ ಡ್ಯಾಂನಿಂದ ಕಾವೇರಿ ನದಿಗೆ 7,279 ಕ್ಯುಸೆಕ್ ಬಿಡುಗಡೆ ಆಗಿದೆ) ಆದರೆ, ಒಳ ಹರಿವಿನ ಪ್ರಮಾಣ 1000 ಕ್ಯೂಸೆಕ್‌ ಮಾತ್ರವೇ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯೇ ಬಂದಿಲ್ಲದಿರುವುದರಿಂದ ನೀರಿನ ಪ್ರಮಾಣ ಹರಿದುಬರುತ್ತಿಲ್ಲ.

ಈಗ ಕೆಆಎಸ್‌ನಲ್ಲಿರುವ ನೀರಿನ ಪ್ರಮಾಣವೂ 23 ಟಿಎಂಸಿಗೆ ಇಳಿದಿದೆ. ಕಾವೇರಿ ಪ್ರಾಧಿಕಾರದ ಆದೇಶದಂತೆ ಒಂದು ವೇಳೆ ಇನ್ನು 15 ದಿನಗಳ ಕಾಲ ಪ್ರತಿ ದಿನ 5000 ಟಿಎಂಸಿ ನೀರು ಬಿಟ್ಟರೆ ಅದಕ್ಕೇ ಏಳು ಟಿಎಂಸಿ ನೀರು ಬೇಕಾಗುತ್ತದೆ. ಅಂದರೆ ಅಷ್ಟು ಹೊತ್ತಿಗೆ ನೀರಿನ ಮಟ್ಟ 90 ಅಡಿಗೆ ಇಳಿಯುತ್ತದೆ.

ಒಂದು ಕಡೆ ತಮಿಳುನಾಡಿಗೆ ನೀರು ಬಿಡುತ್ತಿರುವಂತೆಯೇ ಕೃಷಿಗೂ ಸಣ್ಣ ಪ್ರಮಾಣದ ನೀರು ಹರಿಯುತ್ತಿದೆ. ನೀರಿನ ಮಟ್ಟ 74 ಅಡಿವರೆಗೆ ಇದ್ದಾಗ ಮಾತ್ರ ಕೃಷಿಗೆ ನೀರು ಬಿಡಬಹುದು. ಅದಕ್ಕಿಂತ ಕಡಿಮೆಯಾದರೆ ನೀರು ಬಿಡಲು ಸಾಧ್ಯವಿಲ್ಲ. ಹೀಗಾಗಿ ಕೃಷಿಕರಿಗೂ ದೊಡ್ಡ ಪ್ರಮಾಣದಲ್ಲಿ ತೊಂದರೆ ಖಚಿತ.

ಕಾವೇರಿ ಹಿನ್ನೀರು ಪ್ರದೇಶ ಸಂಪೂರ್ಣ ಬರಿದಾಗಿದೆ.

ಉಳಿಯೋದು ಬರೀ 11 ಟಿಎಂಸಿ ನೀರು ಮಾತ್ರ!

ಈಗ ಇರುವ 23 ಟಿಎಂಸಿ ನೀರಿನಲ್ಲಿ ಹದಿನೈದು ದಿನಗಳ ತಮಿಳುನಾಡಿಗೆ ನೀರು ಹರಿಸಿ 7 ಟಿಎಂಸಿ ನೀರು ಖಾಲಿ ಮಾಡಿದರೆ ಉಳಿಯುವುದು 16 ಟಿಎಂಸಿ ಮಾತ್ರ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್. ಅಂದರೆ ಇದು ಬಳಕೆಗೆ ಸಿಗುವುದಿಲ್ಲ.

ಅಂದರೆ ಒಟ್ಟಾರೆಯಾಗಿ ಕೆ.ಆರ್.ಎಸ್ ಡ್ಯಾಂನಲ್ಲಿ ಉಳಿಯೋದು ಕೇವಲ 11 ಟಿಎಂಸಿ ನೀರು. ಇಷ್ಟು ಪ್ರಮಾಣದ ನೀರೂ ಇಲ್ಲವಾದರೆ ಬೆಂಗಳೂರು, ಮಂಡ್ಯ, ಮೈಸೂರಿಗೆ ಕುಡಿಯುವ ನೀರನ್ನು ಒದಗಿಸುವುದು ಕೂಡಾ ಕಷ್ಟವಾಗುತ್ತದೆ. ಅದರಲ್ಲೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಆದೇಶವೇನಾದರೂ ಬಂದರೆ ಭಾರಿ ಸಮಸ್ಯೆ ಎದುರಾಗಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾವೇರಿ ಜಲ ಬಿಕ್ಕಟ್ಟು; ಪ್ರತಿಬಾರಿ ಕರ್ನಾಟಕದ ಮೇಲೆ ಒತ್ತಡ ಏಕೆ?

ಎಲ್ಲ ಕಡೆ ಪ್ರತಿಭಟನೆ

ಈ ನಡುವೆ, ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯದ ಹಲವು ಕಡೆ ಪ್ರತಿಭಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ. ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದಲ್ಲಿ ಕಾವೇರಿ ನದಿಗೆ ಇಳಿದು ಪ್ರತಿಭಟನೆ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣದ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರೊ ಅರೆಬೆತ್ತಲೆ ಪ್ರತಿಭಟನೆ ನಡೆದಿದೆ.

Exit mobile version