Site icon Vistara News

ಜನತಾ ಜಲಧಾರೆ ಯಶಸ್ಸಿಗೆ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿರುವ ಜನತಾ ಜಲಧಾರೆ ಬೃಹತ್‌ ಸಮಾವೇಶ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಎಚ್‌ಡಿಕೆ, ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿ ಶುಕ್ರವಾರ ನಡೆಯುವ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿ ಆಗಲೆಂದು ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ. ತಾಯಿ ಅನುಗ್ರಹದಿಂದ ಸಮಾವೇಶ ಯಶಸ್ವಿ ಆಗುತ್ತದೆ. ನಮ್ಮ ಜೆಡಿಎಸ್ ಪಕ್ಷದ ಜನತಾ ಜಲಧಾರೆ ವಾಹನದ ಮೂಲಕ ನಾಡಿನ ನೀರಾವರಿ ಯೋಜನೆ ಹಾಗೂ ಜೆಡಿಎಸ್ ಪಕ್ಷದ ನೀರಾವರಿ ಯೋಜನೆಗಳ ಕನಸ್ಸನ್ನು ರಾಜ್ಯಾದ್ಯಂತ ಜನತೆಗೆ ತಿಳಿಸಲಾಗಿದೆ ಎಂದು ಹೇಳಿದರು.

ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದ ಈ ತನಕ ರಾಜ್ಯದಲ್ಲಿ ನಿರಂತರವಾಗಿ ಉತ್ತಮ ಮಳೆಯಾಗುತ್ತಿದೆ. ಇದು ಶುಭ ಸೂಚಕ. ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೆ. ಈ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈಗಾಗಲೇ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕೆಲಸ ಆರಂಭಿಸಿದ್ದಾರೆ ಎಂದು ತಿಳಿಸಿದರು. ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮುಂತಾದವರು ಹಾಜರಿದ್ದರು.

 ಇದನ್ನೂ ಓದಿ: ಇದು ಮಹಾಭಾರತ, HDK ಅರ್ಜುನ, ನಾನೇ ಶ್ರೀಕೃಷ್ಣ: ಬಾದಾಮಿಯಲ್ಲಿ ಸಿ.ಎಂ. ಇಬ್ರಾಹಿಂ ಮಾತು 

Exit mobile version