Site icon Vistara News

CM Siddaramaiah : ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ; ಅನ್ನ ಕೊಟ್ಟ ದೇವ್ರು ಸಿದ್ದರಾಮಯ್ಯ ಎಂದ ಮಹಿಳೆ

CM Siddaramaiah Sangolli Rayanna

ಮೈಸೂರು: ಸಂಗೊಳ್ಳಿ ರಾಯಣ್ಣ (Sangolli Rayanna) ಹುಟ್ಟಿದ್ದು ಆಗಸ್ಟ್ 15, ನೇಣು ಹಾಕಿದ್ದು ಜನವರಿ 26. ಅಂದೇ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇದು ಕಾಕತಾಳೀಯವಾದರೂ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಮಂಗಳವಾರ ಮೈಸೂರಿನ ಉತ್ತನಹಳ್ಳಿಯ ಶ್ರೀ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ (Sangolli Rayanna statue) ಮಾತನಾಡಿದರು.

ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಸಂಗೊಳ್ಳಿಯಲ್ಲಿ 110 ಎಕರೆ ಜಾಗ ನೀಡಿ ಅಲ್ಲಿ ಸೈನಿಕ ಶಾಲೆಯನ್ನು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ತೆರೆಯಲಾಗಿದೆ. ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ, ಪ್ರಾಧಿಕಾರ ಮಾಡಲಾಗಿದ್ದು 285 ಕೋಟಿ ರೂ.ಗಳ ವೆಚ್ಚದಲ್ಲಿ ಆಗಿದೆ. ಅವರ ಜ್ಞಾಪಕಾರ್ಥವಾಗಿ ಇದನ್ನು ಮಾಡಲಾಗಿದೆ. ಜನರು ಅಲ್ಲಿಗೆ ಭೇಟಿ ನೀಡಬೇಕಂದು ಸಲಹೆ ನೀಡಿದರು.

ಮೈಸೂರಿನಲ್ಲಿ ಕೂಡಾ ಅಪ್ರತಿಮ ದೇಶಭಕ್ತನ ಪ್ರತಿಮೆಯನ್ನು ಸ್ಥಾಪಿಸಿ ಅನಾವರಣ ಮಾಡಿದ್ದು ತುಂಬ ಸಂತೋಷದ ವಿಷಯ. ಇಂಥ ಕೆಲಸಗಳು ನಡೆದು ಜನರಲ್ಲಿ ದೇಶಭಕ್ತಿ, ನಾಯಕರ ಬಗ್ಗೆ ಸದಭಿಪ್ರಾಯ ಮೂಡುವಂತಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: Karnataka Police : ರಾಜಕೀಯ ಶಕ್ತಿ ಎಷ್ಟೇ ಇದ್ದರೂ ದ್ವೇಷಕಾರರ ಮಟ್ಟ ಹಾಕಿ: ಸಿಎಂ ಸಿದ್ದರಾಮಯ್ಯ

ಹೆಲಗೆಹುಂಡಿಗೆ ವಿಶೇಷ ಅನುದಾನ

ಮೈಸೂರಿನ ಹೆಲಗೆಹುಂಡಿಯಲ್ಲಿ ಕೆಲಸಗಳಾಗಿಲ್ಲ. ವಿಶೇಷ ಅನುದಾನ ನೀಡಿ ಇಲ್ಲಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ.!

ಮೈಸೂರಿನ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಕಂಡು ಮಹಿಳೆಯೊಬ್ಬರು ಕೈ ಮುಗಿದು: ಅನ್ನ ಕೊಟ್ಟ ದೇವ್ರು… ನೀನು ಚೆನ್ನಾಗಿರಪ್ಪ ಎಂದು ಹೇಳಿದ್ದು ಗಮನ ಸೆಳೆಯಿತು.

Woman calls siddaramaiah Devru

ಸಿದ್ದರಾಮಯ್ಯ ಅವರು ದೇವಿಯ ದರ್ಶನ ಪಡೆದು ಕಾರು ಹತ್ತುವ ವೇಳೆ ದೂರದಲ್ಲಿದ್ದ ಮಹಿಳೆ ಓಡೋಡಿ ಬಂದರು. “ನೀನು ಅನ್ನ ಕೊಟ್ಟ ದೇವರು ಕಣಪ್ಪ ಚೆನ್ನಾಗಿರಪ್ಪ”. ನಿನ್ನನ್ ನೋಡಿ ಸಂತೋಷ ಆಯ್ತುʼʼ ಎಂದರು.

ಮಹಿಳೆಯ ಮಾತು ಕೇಳಿ ಮುಗುಳು ನಗೆ ಬೀರಿ, ಕಾರು ಹತ್ತಿ ತೆರಳಿದರು ಸಿದ್ದರಾಮಯ್ಯ. ಸಿಎಂ ನೀಡಿದ ಅನ್ನಭಾಗ್ಯ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಿಳೆಯನ್ನು ಮಹಿಳಾ ಪೊಲೀಸರು ಬಳಿಕ ದೂರ ಕಳುಹಿಸಿದರು!

Exit mobile version