ಬೆಂಗಳೂರು: ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ (Mysore Dasara) ಕಾರ್ಯಕ್ರಮ ನೀಡಲು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (Pandit Rajeev Tharanath) ಅವರ ಬಳಿಯೇ ಅಧಿಕಾರಿಗಳು ಕಮಿಷನ್‌ಗೆ ಬೇಡಿಕೆ (Demand for commission) ಇಟ್ಟ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿರುದ್ಧ ಭಾರಿ ಜನಾಕ್ರೋಶ (Commission politics) ವ್ಯಕ್ತವಾಗಿದೆ.
ಪಂಡಿತ್ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಗೊತ್ತು ಮಾಡಿಕೊಂಡಿದ್ದ ಅಧಿಕಾರಿಗಳು ಒಂದು ಮೊತ್ತವನ್ನು ನಿಗದಿ ಮಾಡಿದ್ದರು. ಆ ಮೊತ್ತವನ್ನು ಪಾವತಿ ಮಾಡುವಾಗ ಖಾತೆಗೆ ಹೆಚ್ಚುವರಿಯಾಗಿ ಮೂರು ಲಕ್ಷ ರೂ. ಹಾಕುತ್ತೇವೆ, ಅದನ್ನು ನೀವು ನಮಗೆ ವಾಪಸ್ ಕೊಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಸ್ವತಃ ರಾಜೀವ್ ತಾರಾನಾಥ್ ಅವರು ಕಮಿಷನ್ ಹಗರಣವನ್ನು ಬಯಲು ಮಾಡಿದ್ದಾರೆ.
ಇಬ್ಬರು ಅಧಿಕಾರಿಗಳು ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಈ ರೀತಿ ಬೇಡಿಕೆ ಮಂಡಿಸಿದ್ದಾರೆ. ಇವರು ಇನ್ನೆಷ್ಟು ಮಂದಿಯಿಂದ ಈ ರೀತಿಯಾಗಿ ಲಂಚಕ್ಕೆ ಕೈಯ್ಯೊಡ್ಡಿರಬಹುದು. ಈ ರೀತಿ ಹೆಚ್ಚು ಸಂಭಾವನೆ ಬಿಲ್ ಮಾಡಿ ಹಣ ಲೂಟಿ ಮಾಡಿರಬಹುದು ಎಂಬ ಚರ್ಚೆ ನಡೆದಿದೆ. ರಾಜೀವ್ ತಾರಾನಾಥ್ ಅವರು ನೇರ ನಡೆನುಡಿಯವರಾಗಿದ್ದು, ಅವರನ್ನು ಉಗಿದು ಕಳುಹಿಸಿದ್ದಾರೆ. ಆದರೆ, ಅದೆಷ್ಟೋ ಇತರ ಕಲಾವಿದರು ಇವರ ಕಿರಿಕಿರಿಗೆ ಬೇಸತ್ತು ವಾಪಸ್ ಮಾಡಲು ಒಪ್ಪಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ನಾಡಿನಾದ್ಯಂತ ಭ್ರಷ್ಟಾಚಾರದ ಈ ಹೊಸ ವಿಧಾನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮಾನ ಹರಾಜು ಎಂದ ವಿಜಯೇಂದ್ರ
ʻʻಕಾಂಗ್ರೆಸ್ ಸರ್ಕಾರದ ‘ಕಮಿಷನ್ ಕೆನ್ನಾಲಿಗೆ’ ನಾಡಹಬ್ಬ ದಸರೆಗೂ ಚಾಚಿಕೊಂಡಿದೆ, ಕಾರ್ಯಕ್ರಮ ನೀಡುವ ಕಲಾವಿದರ ಬಳಿಯೂ ಪರ್ಸೆಂಟೇಜ್ ವಸೂಲಿ ದಂಧೆಗಿಳಿದಿರುವ ಸರ್ಕಾರ ಇನ್ಯಾರನ್ನು ತಾನೆ ಬಿಟ್ಟೀತು? ‘ಸರೋದ್ ಮಾಂತ್ರಿಕ’ನೆಂದೇ ಹೆಸರಾದ ಪದ್ಮಶ್ರೀ ಪುರಸ್ಕೃತ 91ರ ಹಿರಿಯ ಅಂತಾರಾಷ್ಟ್ರೀಯ ಕಲಾವಿದ ಪಂ.ರಾಜೀವ್ ತಾರಾನಾಥರ ಬಳಿ ಪರ್ಸೆಂಟೇಜ್ ಕೇಳಲು ಹೋಗಿ ಅಧಿಕಾರಿಗಳು ಛೀಮಾರಿ ಹಾಕಿಸಿಕೊಂಡಿದ್ದಾರೆ.ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಸಾಂಸ್ಕೃತಿಕ ಕ್ಷೇತ್ರವನ್ನೂ ಕಲುಷಿತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಹಾಕುತ್ತಿದೆʼʼ ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ‘ಕಮಿಷನ್ ಕೆನ್ನಾಲಿಗೆ’ ನಾಡಹಬ್ಬ ದಸರೆಗೂ ಚಾಚಿಕೊಂಡಿದೆ, ಕಾರ್ಯಕ್ರಮ ನೀಡುವ ಕಲಾವಿದರ ಬಳಿಯೂ ಪರ್ಸೆಂಟೇಜ್ ವಸೂಲಿ ದಂಧೆಗಿಳಿದಿರುವ ಸರ್ಕಾರ ಇನ್ಯಾರನ್ನು ತಾನೆ ಬಿಟ್ಟೀತು?
— Vijayendra Yediyurappa (@BYVijayendra) October 14, 2023
‘ಸರೋದ್ ಮಾಂತ್ರಿಕ’ನೆಂದೇ ಹೆಸರಾದ ಪದ್ಮಶ್ರೀ ಪುರಸ್ಕೃತ 91ರ ಹಿರಿಯ ಅಂತಾರಾಷ್ಟ್ರೀಯ ಕಲಾವಿದ ಪಂ.ರಾಜೀವ್ ತಾರಾನಾಥರ ಬಳಿ ಪರ್ಸೆಂಟೇಜ್ ಕೇಳಲು… pic.twitter.com/xZCfcQ1qgz