ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನ ಆಡಳಿತಾತ್ಮಕ ತರಬೇತಿ ಸಂಸ್ಥೆಯ(ಎಟಿಐ) ಪೀಠೋಪಕರಣಗಳನ್ನು ಹೊತ್ತೊಯ್ದಿದ್ದಾರೆ ಎಂಬ ಪ್ರಕರಣ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ಒಪ್ಪಿಸಲು ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆಯ ಕಾಗದ ಪತ್ರಗಳ ಸಮಿತಿ ನಿರ್ಧಾರ ಮಾಡಿದೆ.
ಸದ್ಯ ಮುಜರಾಯಿ ಆಯುಕ್ತೆಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ 2020ರ ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹುಣಸೂರು ರಸ್ತೆಯಲ್ಲಿ ಜಿಲ್ಲಾಧಿಕಾರಿಗಳ ನಿವಾಸ ಇದೆ. ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ಮೈಸೂರಿಗೆ ಬಂದಾಗ ಹಿಂದಿನ ಜಿಲ್ಲಾಧಿಕಾರಿ ಶರತ್ ಅವರು ಆ ಮನೆಯಲ್ಲಿ ವಾಸವಿದ್ದರು. ತಾತ್ಕಾಲಿಕವಾಗಿ ವಾಸಕ್ಕೆ ಅವಕಾಶ ಪಡೆದ ರೋಹಿಣಿ ಸಿಂಧೂರಿ, ಅತಿಥಿ ಗೃಹ ಖಾಲಿ ಮಾಡುವಾಗ ಅಲ್ಲಿದ್ದ ವಸ್ತುಗಳನ್ನೆಲ್ಲ ಹೊತ್ತೊಯ್ದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
23 ಬಗೆಯ 48 ವಸ್ತುಗಳನ್ನು ಸಿಂಧೂರಿ ಅವರ ಸಿಬ್ಬಂದಿ ಹೊತ್ತೊಯ್ದಿದ್ದಾರೆ, 8 ವಸ್ತುಗಳು ಹಾನಿಯಾಗಿವೆ ಎಂಬ ದೂರು ಕೇಳಿಬಂದಿತ್ತು. ಎಟಿಎ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ಕಚೇರಿಗೆ ವಸ್ತುಗಳು ಶಿಫ್ಟ್ ಆಗಿರಬಹುದು. ಸಿಬ್ಬಂದಿ ಮಾಡಿದ ತಪ್ಪಿಗೆ ರೋಹಿಣಿ ಸಿಂಧೂರಿಗೆ ಬರೋಬ್ಬರಿ ಮೂರು ಬಾರಿ ಪತ್ರ ಬರೆಯಲಾಗಿದೆ. ಆದರೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗಲೇ ಎರಡು ಪತ್ರ ಬರೆದಿದ್ದ ಎಟಿಐ, ಇದೀಗ ಮುಜರಾಯಿ ಆಯುಕ್ತರಾದ ನಂತರ ಇತ್ತೀಚೆಗೆ ಮತ್ತೊಂದು ಪತ್ರ ಬರೆದಿತ್ತು. ಆದರೆ ರೋಹಿಣಿ ಸಿಂಧೂರಿ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ಸಾ. ರಾ. ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಎಟಿಐ ಜಂಟಿ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ ಸೇರಿ ಅನೇಕರು ಭಾಗವಹಿಸಿದ್ದರು. ಇಲ್ಲಿವರೆಗೆ ಆರು ನೋಟಿಸ್ ನೀಡಲಾಗಿದೆ. ಈ ಕುರಿತು ಮೊದಲಿಗೆ ಪೊಲೀಸ್ ದೂರು ದಾಖಲಿಸಬೇಕು. ನಂತರ ಲೋಕಾಯುಕ್ತದಿಂದ ತನಿಖೆಗೆ ಒಪ್ಪಿಸಬೇಕು ಎಂದು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | ರೋಹಿಣಿ ಸಿಂಧೂರಿ ವಿರುದ್ಧ ಲಕ್ಕಿ ಅಲಿ ಆರೋಪ: ಕಾನೂನು ಕ್ರಮದ ಎಚ್ಚರಿಕೆ ನೀಡಿದ IAS ಅಧಿಕಾರಿ