ಮೈಸೂರು: ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರು ಅಕ್ರಮ ಗೋವು ಸಾಗಾಣೆ (Cow Smugglers) ನಡೆಯುತ್ತಲೆ ಇದೆ. ಸದ್ಯ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಜಾನುವಾರುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಂತರಸಂತೆ ಠಾಣಾ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ್ದಾರೆ. 200ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಗಳು ಅಕ್ರಮವಾಗಿ ಕೇರಳಕ್ಕೆ ಗೋವುಗಳನ್ನು ಸಾಗಣಿಕೆ ಮಾಡುತ್ತಿದ್ದರು.
ಖಚಿತ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ. ಆರೋಪಿಗಳ ಬೆನ್ನಿಗೆ ಬಿದ್ದ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ, ಜಾನುವಾರಗಳನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಗೆ ಬೆಂಗಳೂರಿನ ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿ ದಯಾ ಸಂಘದವರು ಸಾಥ್ ನೀಡಿದ್ದಾರೆ.
ಆರೋಪಿಗಳು ಹ್ಯಾಂಡ್‌ಪೋಸ್ಟ್, ಅಂತರಸಂತೆ, ಕಾರಾಪುರ ಮಾರ್ಗವಾಗಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ದಾಟಿ ಕೇರಳಕ್ಕೆ ಸಾಗಾಟಕ್ಕೆ ಯತ್ನಿಸಿದ್ದಾರೆ. 5 ಬೃಹತ್ ಕಂಟೈನರ್ ಲಾರಿ ಮತ್ತು 5 ಗೂಡ್ಸ್ ವಾಹನಗಳಲ್ಲಿದ್ದ ಸುಮಾರು 200 ಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ, ಕಿಕ್ಕೇರಿ, ದರ್ಗ, ಮೈಸೂರು ಮೂಲದ 11 ಮಂದಿ ಹಾಗೂ 8 ವಾಹನಗಳನ್ನು ವಶ ಪಡೆದುಕೊಳ್ಳಲಾಗಿದೆ. ಡಿವೈಎಸ್‌ಪಿ ಮಹೇಶ್, ಸರಗೂರು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ಅಂತರಸಂತೆ ಪಿಎಸ್‌ಐ ರವಿಶಂಕರ್, ಕ್ರೈಂ ವಿಭಾಗದ ಸಿಬ್ಬಂದಿ ಸೇರಿ 13 ಜನರ ಮೂರು ತಂಡದಿಂದ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ