Dasara 2023 : ಸ್ತಬ್ಧ ಚಿತ್ರಗಳಿಗೆ ಫೈನಲ್ ಟಚ್; ಜಂಬೂ ಸವಾರಿಯಲ್ಲಿ ಗ್ಯಾರಂಟಿ ಯೋಜನೆಗಳ ಮೆರವಣಿಗೆ
Deepa S
ಮೈಸೂರು: ಮೈಸೂರು ದಸರಾವನ್ನು (Dasara 2023) ಕಣ್ತುಂಬಿಕೊಳ್ಳಲು ದೇಶ-ವಿದೇಶದಿಂದ ಜನರು ಆಗಮಿಸುತ್ತಿದ್ದಾರೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಜಂಬೂ ಸವಾರಿಯಲ್ಲಿ ಈ ಬಾರಿ 47 ಸ್ತಬ್ಧ ಚಿತ್ರಗಳ (Dasara Tableaux) ಮೆರವಣೆಗೆ ಇರಲಿದೆ.
ಈಗಾಗಲೇ ಸ್ತಬ್ಧ ಚಿತ್ರಗಳಿಗೆ ಕಲಾವಿದರು ಅಂತಿಮ ರೂಪ ನೀಡುತ್ತಿದ್ದಾರೆ. ಪ್ರತಿ ಜಿಲ್ಲಾ ಪಂಚಾಯಿತಿಯಿಂದ ತಲಾ ಒಂದು ಸ್ತಬ್ಧಚಿತ್ರ ಇರಲಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ಚಾಮರಾಜನಗರದ ಮಲೆ ಮಹದೇಶ್ವರ ದೇವಾಲಯ, ಮಂಡ್ಯ ಕಬ್ಬಿನ ಗಾಡಿ, ಲಕ್ಕುಂಡಿ ಬ್ರಹ್ಮಜಿನಾಲಯ, ನಿರ್ಮಲ ಗ್ರಾಮ, ವಿಜಯಪುರ ಪ್ರಣವ ಮಂಟಪ ಸೇರಿದಂತೆ ವೈವಿಧ್ಯಮಯ ಸ್ತಬ್ಧಚಿತ್ರಗಳ ನಿರ್ಮಾಣವಾಗುತ್ತಿದೆ.
ಇನ್ನು ಜಂಬೂ ಸವಾರಿಯಲ್ಲಿ ಗ್ಯಾರಂಟಿ ಯೋಜನೆಗಳ ಮೆರವಣಿಗೆಯೂ ಇರಲಿದೆ. ಸ್ತಬ್ಧಚಿತ್ರದ ಮೂಲಕ ಸರ್ಕಾರದ ಯೋಜನೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಮಾದರಿ ನಿರ್ಮಾಣ ಮಾಡಲಾಗುತ್ತಿದೆ.