Site icon Vistara News

Dasara Commission : ನನ್ನಲ್ಲಿ ಯಾರೂ ಕಮಿಷನ್‌ ಕೇಳಿಲ್ಲ; ಪಂ. ರಾಜೀವ್‌ ತಾರಾನಾಥ್‌ ಸ್ಪಷ್ಟನೆ

Pandit Rajeev Tharanat and officers Mysore dasara Commission issue

ಬೆಂಗಳೂರು: ಯಾವ ಅಧಿಕಾರಿಯಾಗಲೀ, ಮೈಸೂರು ದಸರಾ (Mysore Dasara) ಸಾಂಸ್ಕೃತಿಕ ಉತ್ಸವ ಸಮಿತಿಯ ಪದಾಧಿಕಾರಿಗಳಾಗಲೀ, ಅವರ ಹೆಸರಿನಲ್ಲಾಗಲೀ ನನ್ನಲ್ಲಿ ಯಾರೂ ಕಮಿಷನ್‌ (Dasara Commission) ಕೇಳಿಲ್ಲ ಎಂದು ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ (Pandit Rajeev Tharanath) ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರು ಮತ್ತು ಜಂಟಿ ನಿರ್ದೇಶಕರು ಜತೆಯಾಗಿ ಶನಿವಾರ ರಾಜೀವ್‌ ತಾರಾನಾಥ್‌ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ವೇಳೆ ಈ ಸ್ಪಷ್ಟನೆಯನ್ನು ನೀಡಿದರು.

ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಗೆ ಮೈಸೂರಿನ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಕೋರಲಾಗಿತ್ತು. ಅವರು ಒಪ್ಪಿದ ಬಳಿಕ ಅಧಿಕಾರಿಗಳು ಅವರನ್ನು ಭೇಟಿಯಾಗಿ ನಿಮಗೆ ನಿಗದಿಯಾದ ಮೊತ್ತಕ್ಕಿಂತ ಮೂರು ಲಕ್ಷ ರೂ. ಹೆಚ್ಚುವರಿ ಹಣ ಆರ್‌ಟಿಜಿಎಸ್‌ ಮಾಡುತ್ತೇವೆ. ಬಳಿಕ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕು ಎಂದು ಅವರನ್ನು ಕೇಳಲಾಗಿತ್ತು. ಇದರಿಂದ ಆಕ್ರೋಶಿತರಾದ ರಾಜೀವ್‌ ತಾರಾನಾಥ್‌ ಅವರು ತಾನು ಕಾರ್ಯಕ್ರಮವನ್ನೇ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಾರ್ಯಕ್ರಮವೇ ರದ್ದಾಗಿದೆ ಎಂದು ಮೈಸೂರಿನ ಪತ್ರಿಕೆಯೊಂದು ವರದಿ ಮಾಡಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿ ಸರ್ಕಾರ ದಸರಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಕಮಿಷನ್‌ ಹೊಡೆಯುತ್ತಿದೆ ಎಂಬ ಸುದ್ದಿ ಹರಡಿತ್ತು.

ಅಧಿಕಾರಿಗಳ ತಂಡ ರಾಜೀವ್‌ ತಾರಾನಾಥ್‌ ಮನೆಗೆ

ಪತ್ರಿಕಾ ವರದಿ ಮತ್ತು ನಂತರ ಕೇಳಿಬಂದ ಆಪಾದನೆಗಳ ಹಿನ್ನೆಲೆಯಲ್ಲಿ ಜಿಪಂ ಸಿಇಒ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ರಾಜೀವ್‌ ತಾರಾನಾಥ್‌ ಅವರ ಮನೆಗೆ ಭೇಟಿ ನೀಡಿದರು. ಪತ್ರಿಕಾ ವರದಿಯ ಬಗ್ಗೆ ಪ್ರಸ್ತಾಪಿಸಿದ ಅಧಿಕಾರಿಗಳು, ಈ ವರದಿ ನಿಜವೇ? ಯಾರಾದರೂ ಅಧಿಕಾರಿಗಳು ನಿಮ್ಮ ಬಳಿ ಬಂದಿದ್ದಾರೆಯೇ? ಈ ರೀತಿ ಕಮಿಷನ್‌ ಬಗ್ಗೆ ಮಾತನಾಡಿದ್ದಾರೆಯೇ ಎಂದು ಸ್ಪಷ್ಟನೆ ಬಯಸಿದರು.

ಆಗ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರು ಯಾವ ಅಧಿಕಾರಿಯೂ ಬಂದಿಲ್ಲ, ಈ ಬಗ್ಗೆ ಮಾತನಾಡಿಲ್ಲ ಎಂದರು. ಸಾಂಸ್ಕೃತಿಕ ಉತ್ಸವ ಸಮಿತಿಯ ಯಾರಾದರೂ ಬಂದಿದ್ದಾರೆಯೇ ಎಂದು ಕೇಳಲಾಯಿತು. ಆಗಲೂ ರಾಜೀವ್ ತಾರಾನಾಥ್‌ ಅವರು ಇಲ್ಲವೇ ಇಲ್ಲ ಎಂದರು. ಸಾಂಸ್ಕೃತಿಕ ಉತ್ಸವದ ಸಮಿತಿ ಪರವಾಗಿ ಯಾರಾದರೂ ಮಾತನಾಡಿದ್ದಾರೆಯೇ ಎಂದು ಕೇಳಿದರು. ಆಗಲೂ ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಯಾರೋ ಅನಾಮಧೇಯರು ಏನೋ ಹೇಳಿದ್ದಾರೆ ಎಂಬರ್ಥದಲ್ಲಿ ರಾಜೀವ್‌ ತಾರಾನಾಥ್‌ ಮಾತನಾಡಿದರು.

ರಾಜೀವ್‌ ತಾರಾನಾಥ್‌ ಕಾರ್ಯಕ್ರಮಕ್ಕೆ ಬರಲ್ಲ ಅಂದಿದ್ಯಾಕೆ?

ಈ ನಡುವೆ, ರಾಜೀವ್‌ ತಾರಾನಾಥ್‌ ಅವರು ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲಾಗುವುದಿಲ್ಲ ಎಂದು ಹೇಳಿದ್ದು ನಿಜ ಎಂದು ತಿಳಿದುಬಂದಿದೆ. ಅದನ್ನು ಕೂಡಾ ಅಧಿಕಾರಿಗಳ ನಿಯೋಗವೇ ಉಲ್ಲೇಖ ಮಾಡಿತು.

ಕಮಿಷನ್‌ ಕೇಳಿದ್ದಾರೆ ಎಂಬ ಕಾರಣಕ್ಕೆ ನೀವು ಕಾರ್ಯಕ್ರಮ ರದ್ದು ಮಾಡಿದ್ದಾಗಿ ಪತ್ರಿಕೆಯಲ್ಲಿ ವರದಿ ಬಂದಿದೆ. ಆದರೆ, ಕಾರ್ಯಕ್ರಮ ಕೊಡುವಂತೆ ನಾವು ಹಿಂದೆಯೇ ನಿಮ್ಮಲ್ಲಿ ಕೇಳಿಕೊಂಡಿದ್ದೆವು. ಆದರೆ, ಆರೋಗ್ಯದ ಕಾರಣಕ್ಕಾಗಿ ನೀವು ಆಗುವುದಿಲ್ಲ ಎಂದು ಹೇಳಿದ್ದಿರಿ ಅಲ್ಲವೇ ಎಂದು ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ. ಆಗ ರಾಜೀವ್‌ ತಾರಾನಾಥ್‌ ಅವರು ಅದು ಹಿಂದಿನ ಕಥೆ ಎಂದು ಹೇಳಿದರು.

ಇದನ್ನೂ ಓದಿ: Commission politics : ಪಂ. ರಾಜೀವ್‌ ತಾರಾನಾಥ್‌ಗೂ ಕಮಿಷನ್‌ ಕಾಟ; ಲಜ್ಜೆಗೆಟ್ಟ ಸರ್ಕಾರ ಎಂದ ವಿಜಯೇಂದ್ರ

ಹಾಗಿದ್ದರೆ ಈ ಬಾರಿ ಕಾರ್ಯಕ್ರಮ ಕೊಡುತ್ತಾರಾ?

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಇನ್ನೊಂದು ವಿಚಾರವನ್ನು ಕೇಳುತ್ತಾರೆ. ಆವತ್ತು ನಾವು ಕೇಳಿದಾಗ ಆರೋಗ್ಯ ಸಮಸ್ಯೆ ಇತ್ತು. ಈಗ ಆರೋಗ್ಯವಾಗಿದ್ದೀರಿ. ಅವಕಾಶವಿದ್ದರೆ ಕಾರ್ಯಕ್ರಮ ಕೊಡಬಹುದಾ ಎಂದು ಅಧಿಕಾರಿಗಳು ಕೇಳುತ್ತಾರೆ. ಆಗ ರಾಜೀವ್‌ ತಾರಾನಾಥ್‌ ಅವರು ʻಖಂಡಿತ ನೋಡೋಣʼ ಎನ್ನುತ್ತಾರೆ. ಆಗ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಹೇಳುತ್ತೇನೆ, ಧನ್ಯವಾದ ಎನ್ನುತ್ತಾರೆ.

ವಿಡಿಯೊ ಚಿತ್ರೀಕರಣ ನಡೆಸಿದ ಅಧಿಕಾರಿಗಳು

ಪಂಡಿತ್‌ ರಾಜೀವ್‌ ತಾರಾನಾಥ್‌ ಅವರ ಜತೆಗೆ ಮಾತುಕತೆಗೆ ಹೋಗಿದ್ದ ತಂಡ ಎಲ್ಲ ಮಾತುಗಳ ವಿಡಿಯೊ ಚಿತ್ರೀಕರಣ ನಡೆಸಿಕೊಂಡು ಬಂದಿದೆ. ಅದನ್ನು ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೂಲಕ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ.

Exit mobile version