ಮೈಸೂರು: ಒಕ್ಕಲಿಗರ (Vokkaliga communit) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಪ್ರೊ.ಕೆ.ಎಸ್. ಭಗವಾನ್ (Prof KS Bhagavan) ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲು (FIR registered) ಮಾಡಲಾಗಿದೆ. ಐಪಿಸಿ ಸೆಕ್ಷನ್ 153 ಹಾಗೂ 153 A ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್ ಸಿ. ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಮಹಿಷ ಉತ್ಸವದಲ್ಲಿ ಒಕ್ಕಲಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆ ಸಮುದಾಯದವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ಏನು?
ನಮ್ಮದು ಬುದ್ಧ ಧರ್ಮವಾಗಿದೆ. ಬುದ್ಧ ನಮ್ಮಲ್ಲಿ ಹುಟ್ಟಿದವನಾಗಿದ್ದಾನೆ. ಆದರೆ, ಹಿಂದು ಧರ್ಮ ಹೊರಗಿನಿಂದ ಬಂದಿದೆ. ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು. ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಟಿ ಮಾಡಿರುವುದೇ ಬ್ರಾಹ್ಮಣರ ಸೇವೆ ಮಾಡಲು ಎಂದು ತಿಳಿಸಿದ್ದಾರೆ. ಇಂತಹ ಧರ್ಮವು ನಮಗೆ ಬೇಕಿಲ್ಲ. ಒಕ್ಕಲಿಗರು ಸಂಸ್ಕೃತಿ ಹೀನರು. ಈ ಮಾತು ನನ್ನದು ಅಲ್ಲ ಕುವೆಂಪು ಅವರದ್ದು. ನಾನು ಹೇಳಿದರೆ ನನ್ನನ್ನು ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರೂ ಬಿಡಲ್ಲ. ಆದರೆ ನಿಜ ಹೇಳಿಯೇ ಸಾಯಬೇಕು ಎಂದು ಕೆ.ಎಸ್. ಭಗವಾನ್ ಮಹಿಷ ದಸರೆಯ ಭಾಷಣದಲ್ಲಿ ಹೇಳಿದ್ದರು.
ಇದನ್ನೂ ಓದಿ: Government Award : ಸರ್ಕಾರಿ ಪ್ರಶಸ್ತಿಗಳಿಗಿನ್ನು ಅರ್ಜಿ ಸಲ್ಲಿಸುವಂತಿಲ್ಲ; ಆಯ್ಕೆಗೆ ಪರಿಣಿತರ ಸಮಿತಿ: ಡಿ.ಕೆ. ಶಿವಕುಮಾರ್
ದಸರಾ ಕವಿಗೋಷ್ಠಿಯಿಂದಲೂ ಹೆಸರನ್ನು ಕೈಬಿಡಲಾಗಿತ್ತು!
ಅಕ್ಟೋಬರ್ 16ರ ಮೈಸೂರು ದಸರಾ ಕವಿಗೋಷ್ಠಿಯನ್ನು (Poetry Festival) ಸಾಹಿತಿ ಪ್ರೊ.ಕೆ.ಎಸ್. ಭಗವಾನ್ (Prof KS Bhagavan) ಉದ್ಘಾಟಿಸಬೇಕಿತ್ತು. ಆದರೆ, ಅವರು ಮಹಿಷ ಉತ್ಸವದಲ್ಲಿ ಭಾಷಣ ಮಾಡುವ ವೇಳೆ, ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿದ್ದರು. ಹೀಗಾಗಿ ಇವರನ್ನು ಕವಿಗೋಷ್ಠಿಯಿಂದ ಕೈಬಿಡುವಂತೆ ಒಕ್ಕಲಿಗ ಸಮುದಾಯದವರು ಆಗ್ರಹಿಸಿದ್ದರು. ಒಂದು ವೇಳೆ ಅವಕಾಶ ಕೊಟ್ಟರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಆಚರಣೆ ಸಮಿತಿಯು ಪ್ರೊ. ಭಗವಾನ್ ಹೆಸರನ್ನು ಕೈಬಿಟ್ಟು, ಆ ಜಾಗಕ್ಕೆ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರನ್ನು ತಂದಿತ್ತು. ಈಗ ಭಗವಾನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.