ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬಿಜೆಪಿ ಟಿಕೆಟ್ ಹೆಸರಿನಲ್ಲಿ 5 ಕೋಟಿ ರೂ. ವಂಚಿಸಿದ (Five Crore rupees fraud) ಪ್ರಕರಣದಲ್ಲಿ ಯಾರ್ಯಾರೋ ಸಿಕ್ಕಿಬೀಳುವ ಸಾಧ್ಯತೆಗಳು ಹೆಚ್ಚುತ್ತಿವೆ. ಇದೀಗ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಬಂಧನಕ್ಕೆ ಒಳಗಾಗಿ ಅವರ ವಿಚಾರಣೆ ಶುರುವಾಗುತ್ತಿರುವಂತೆಯೇ ಮೈಸೂರಿನ ವಕೀಲರೊಬ್ಬರು ತನ್ನಲ್ಲಿದ್ದ 56 ಲಕ್ಷ ರೂ.ಯನ್ನು ಹಿರೇಹಡಗಲಿ ಮಠದಲ್ಲಿಟ್ಟು ಬಂದಿದ್ದಾರೆ!
ಮೈಸೂರಿನಲ್ಲಿ ವಕೀಲರಾಗಿರುವ ಪ್ರಣವ್ ಪ್ರಸಾದ್ (Lawyer Pranav Prasad) ಎಂಬವರು ಈಗ ಕಾರಿನಲ್ಲಿ ಹಿರೇಹಡಗಲಿಗೆ ಹೋಗಿ ಅಲ್ಲಿನ ಪಲ್ಲಕಿಯ ಮೇಲೆ 56 ಲಕ್ಷ ರೂ. ಇರುವ ಚೀಲವನ್ನು ಇಟ್ಟುಬಂದಿದ್ದಾರೆ. ಜತೆಗೆ ಅಲ್ಲಿರುವ ಅಭಿನವ ಹಾಲಶ್ರೀಗಳ ತಂದೆಗೆ ಹೇಳಬೇಕು ಎಂದು ಬಯಸಿದ್ದೆ. ಆದರೆ, ಅವರು ಸಿಗಲಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಮತ್ತು ಸಿಸಿಬಿಯ ಡಿಸಿಪಿಯರಿಗೆ ಒಂದು ಪತ್ರವನ್ನು ಬರೆದು ತಾವು ಹಣ ಇಟ್ಟು ಬಂದಿರುವ ಬಗ್ಗೆ ವಿಡಿಯೊ ಕೂಡಾ ಮಾಡಿದ್ದಾರೆ.
ಈ ಹಣವನ್ನು ಸ್ವಾಮೀಜಿಯವರ ಚಾಲಕ ಕಚೇರಿಯಲ್ಲಿ ಇಟ್ಟು ಹೋಗಿದ್ದ. ಅದು ಹಣ ಎಂದು ಮೊದಲು ತಿಳಿದಿರಲಿಲ್ಲ. ಬಳಿಕ ಆತನನ್ನು ಕರೆಸಿ ವಿಚಾರಿಸಿದಾಗಲಷ್ಟೇ ಗೊತ್ತಾಯಿತು. ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದರೂ ಆತ ಒಯ್ಯಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸ್ವಾಮೀಜಿಗೂ ಪ್ರಣವ್‌ಗೂ ಏನು ಸಂಬಂಧ? ಹಾಗಿದ್ದರೆ ಪತ್ರದಲ್ಲಿ ಏನಿದೆ?
- ಪಣವ್ ಪ್ರಸಾದ್ (53 ವರ್ಷ) ಆದ ನಾನು ಮೈಸೂರಿನ ನಂ-15171512/ ಸಿ ಮತ್ತು ಡಿ ಬ್ಲಾಕ್, ಅನಿಕೇತನ ರಸ್ತೆ, ಕೃಷ್ಣಂ ಸುವಿಧಾ ಅಪಾರ್ಟೆಂಟ್ ಕುವೆಂಪು ನಗರ, ಮೈಸೂರು -23 ಈ ವಿಳಾಸದಲ್ಲಿ ವಾಸವಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ.
- ಚೈತ್ರ ಕುಂದಾಪುರ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಇದೇ ಅಭಿನವ ಹಾಲಶ್ರೀ ಸ್ವಾಮೀಜಿಗಳು ನನಗೂ ಮತ್ತು ನನ್ನ ಕುಟುಂಬಿಕರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿಂದ ನಮ್ಮ ಒಡನಾಟದಲ್ಲಿ ಇದ್ದರು.
- ಇವರು ನಮ್ಮ ಮನೆಗೆ ಬರುವುದು ಆಶೀರ್ವಚನ ನೀಡುವುದು ಪುಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದವು. ಆದರೆ, ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು.
- ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದವು.
- ಅದಾದ ನಂತರ ಕರೆ ಮಾಡಿದ ಚಾಲಕ ರಾಜು ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು.
- ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ಹಣವನ್ನು ಅದನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದನು.
- ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವನಿಗೆ ಹಲವು ಬಾರಿ ಹೇಳಿದೆ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡ ತಲೆಹಾಕಲಿಲ್ಲ. ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಂಬ ಎಂಬುವರಿಗೆ ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ.
- ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಮಾನ್ಯರಾದ ತಮ್ಮ ಗಮನಕ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತಮ್ಮ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ತಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
- ನನಗೆ ಜೀವ ಭಯವಿದ್ದು ತಾವು ಸೂಕ್ತ ರಕ್ಷಣೆ ನೀಡಬೇಕೆಂದು ಕೋರುತ್ತೇನೆ.
ಇದಿಷ್ಟು ಪತ್ರದಲ್ಲಿರುವ ಮಾಹಿತಿ.
ಪತ್ರದಲ್ಲಿ ಇದು ಹಾಲಶ್ರೀ ಸ್ವಾಮೀಜಿ ಅವರ ಚಾಲಕ ಬಿಟ್ಟು ಹೋದ ಬ್ಯಾಗ್‌ನಲ್ಲಿ ಈ ಹಣವಿತ್ತು ಎಂದು ಹೇಳಿರುವ ಪ್ರಣವ್ ಪ್ರಸಾದ್ ಅವರು ಹಿರೇಹಡಗಲಿ ಮಠದಲ್ಲಿ ಮಾಡಿರುವ ವಿಡಿಯೊದಲ್ಲಿ ಇದು ಹಾಲಶ್ರೀ ಸ್ವಾಮೀಜಿಗಳು ನನಗೆ ಕೊಟ್ಟ ಹಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: Halashri Swameeji : ಹಾಲಶ್ರೀ ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ; ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತಾ?
ಸಿಕ್ಕಿಬೀಳುವ ಭಯ ಕಾಡಿದ್ದರಿಂದ ಈ ಕ್ರಮ ಸಾಧ್ಯತೆ
ಹಾಲಶ್ರೀ ಸ್ವಾಮೀಜಿ ಅವರು ಗೋವಿಂದ ಪೂಜಾರಿಯಿಂದ ಪಡೆದ ಹಣದಲ್ಲಿ 50 ಲಕ್ಷ ರೂ.ಯನ್ನು ಮರಳಿಸಿದ್ದಾರೆ. ಉಳಿದ ಹಣದಲ್ಲಿ ಭೂಮಿ, ಪೆಟ್ರೋಲ್ ಪಂಪ್ ಮತ್ತು ಕಾರು ಖರೀದಿಸಿದ್ದಾರೆ. ನಿಜವೆಂದರೆ, ಇಷ್ಟಲ್ಲದೆಯೂ ಸಾಕಷ್ಟು ಹಣ ಹಾಲಶ್ರೀಯವರ ಕೈಯಲ್ಲಿತ್ತು. ಒಂದೊಮ್ಮೆ ತಮ್ಮ ಬಂಧನವಾದರೆ ಅದೆಲ್ಲವೂ ಸಿಕ್ಕಿಬಿಡುತ್ತದೆ ಎಂಬ ಕಾರಣಕ್ಕಾಗಿ ತಮ್ಮ ಆತ್ಮೀಯರ ಮನೆಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಣವ್ ಪ್ರಸಾದ್ ಅವರಿಗೆ ಇದು ಹಣ ಎಂದು ಗೊತ್ತಿಲ್ಲದಿರುವ ಸಾಧ್ಯತೆ ಕಡಿಮೆ. ಅಥವಾ ಅವರೇ ಹೇಳಿದಂತೆ ಸುಮ್ಮನೆ ಇಟ್ಟು ಹೋಗಿರಲೂಬಹುದು. ಆದರೆ, ಈಗ ಹಾಲಶ್ರೀ ಸ್ವಾಮೀಜಿಗಳ ಬಂಧನವಾಗಿರುವುದರಿಂದ ವಿಚಾರಣೆಯ ವೇಳೆ ತಮ್ಮ ಹಣ ಮೈಸೂರಿನ ಪ್ರಣವ್ ಪ್ರಸಾದ್ ಅವರ ಮನೆಯಲ್ಲಿದೆ ಎಂದು ಸ್ವಾಮೀಜಿ ಹೇಳಿಯೇ ಹೇಳುತ್ತಾರೆ. ಆಗ ಸಿಸಿಬಿ ತಮ್ಮನ್ನೂ ಕಟಕಟೆಗೆ ಎಳೆಯುವ ಸಾಧ್ಯತೆ ಇರುವುದರಿಂದ ಮೊದಲೇ ಇದನ್ನು ಮಠಕ್ಕೆ ತಲುಪಿಸಿದರೆ ತಾವು ಸೇಫ್ ಆಗಬಹುದು ಎಂಬ ಉದ್ದೇಶದಿಂದ ಪ್ರಣವ್ ಪ್ರಸಾದ್ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟಾದರೂ ಪೊಲೀಸರು ಪ್ರಣವ್ ಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದೇ ಇದೆ.